Suresh Kumar: ಪೊಲೀಸ್ ಅಧಿಕಾರಿ ವಿಡಿಯೋ ಪ್ರಕರಣ, ಅಕ್ಷಮ್ಯ ಅಪರಾಧ ಎಂದ ಶಾಸಕ ಸುರೇಶ್‌ ಕುಮಾರ್

BJP MLA Suresh Kumar about police officer ramchandra rao case

ಬೆಂಗಳೂರು: ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಅಕ್ಷಮ್ಯ ಅಪರಾಧ

ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೊಲೀಸ್ ಅಧಿಕಾರಿ ಶ್ರೀ ರಾಮಚಂದ್ರ ರಾವ್ ರವರ ಘನಕಾರ್ಯ ಅಕ್ಷಮ್ಯ ಅಪರಾಧ ಎಂದು ಸುರೇಶ್‌ ಕುಮಾರ್‌ ಅವರು ಅಭಿಪ್ರಾಯಪಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಶ್ರೀ ರಾಮಚಂದ್ರ ರಾವ್ ಇಡೀ ಪೊಲೀಸ್ ಇಲಾಖೆಗೆ ಕಳಂಕ ಮೆತ್ತುವ ಕಾರ್ಯವೆಸಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಶಾಸಕ

ಈ ಹಿಂದೆ ಅವರ ಹೆಸರು ಮತ್ತು ಸ್ಥಾನದ ದುರುಪಯೋಗ ಮಾಡಿಕೊಂಡು ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ನಡೆದಿದ್ದಾಗ ಈ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಇದೀಗ ಪ್ರಕಟವಾಗಿರುವ ಈ ಪೊಲೀಸ್ ಅಧಿಕಾರಿಯ ಘನಂಧಾರಿ ಕಾರ್ಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು. ಮತ್ತೆ ಕಡ್ಡಾಯ ರಜೆ ಮೇಲೆ ಕಳಿಸಿ ಕೈ ತೊಳೆದುಕೊಳ್ಳುವುದು ಸರ್ಕಾರಕ್ಕೆ ಭೂಷಣವಲ್ಲ ಎಂದು ಸರ್ಕಾರ ವಿರುದ್ಧ ಸುರೇಶ್‌ ಕುಮಾರ್‌ ಕಿಡಿಕಾರಿದ್ದಾರೆ.

ಅಲ್ಲದೇ, ಸಮವಸ್ತ್ರದಲ್ಲಿಯೇ, ತನ್ನ ಕಚೇರಿಯಲ್ಲಿಯೇ ಈ  ಹಿರಿಯ ಅಧಿಕಾರಿ ಮಾಡಿರುವ ಕೃತ್ಯ ಪೊಲೀಸ್‌ ಇಲಾಖೆಯನ್ನೇ ಸಂಶಯದಿಂದ ಅನುಮಾನದಿಂದ ನೋಡುವಂತಾಗಿದೆ. IPS ಎಂಬ ಅತ್ಯಂತ ಜವಾಬ್ದಾರಿಯುತ ಹೆಸರಿಗೆ ಈ ವ್ಯಕ್ತಿ ಇಂದು ಅಪಚಾರ ಎಸಗಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕಳಿಸಬೇಕೆಂದರೆ, ಸರ್ಕಾರ ಈ ಬಗ್ಗೆ ತುರ್ತು ಮತ್ತು ಪರಿಣಾಮಕಾರಿ ಕ್ರಮವನ್ನು ಘೋಷಿಸಬೇಕು. ಇಲ್ಲದಿದ್ದರೆ ಇಡೀ ಆಡಳಿತವೇ ಕಡ್ಡಾಯ ರಜೆ ಮೇಲೆ ಹೋದಂತೆ ಜನ ಭಾವಿಸುತ್ತಾರೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪೊಲೀಸ್‌ ಕಚೇರಿಯಲ್ಲಿ ಡಿಜಿಪಿ ರಾಸಲೀಲೆ, ವೈರಲ್‌ ಆಯ್ತು ವಿಡಿಯೋ

Leave a Reply

Your email address will not be published. Required fields are marked *