ನವದೆಹಲಿ: ತಮಿಳು ನಟ ಹಾಗೂ ರಾಜಕಾರಣಿ ವಿಜಯ್ ಅವರ ಜನ ನಾಯಗನ್ (Jana Nayagan) ಸಿನಿಮಾ ಸದ್ಯ ಹೈಕೋರ್ಟ್ ಅಂಗಳದಲ್ಲಿ ಇದ್ದು, ಈ ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಕರಣದ ಆದೇಶವನ್ನು ಕಾಯ್ದಿರಿಸಲಾಗಿದೆ.
ಜನವರಿ 27ಕ್ಕೆ ಹೈಕೋರ್ಟ್ ತೀರ್ಪು
ಮಾಹಿತಿಗಳ ಪ್ರಕಾರ, ಮದ್ರಾಸ್ ಹೈಕೋರ್ಟ್ ಜನವರಿ 27, 2026 ರಂದು ದಳಪತಿ ವಿಜಯ್ ಅವರ ಜನನಾಯಗನ್ ಕುರಿತು ಅಂತಿಮ ತೀರ್ಪು ನೀಡಲಿದೆ. ಹೆಚ್. ವಿನೋತ್ ನಿರ್ದೇಶನದ ‘ ಜನನಾಯಗನ್’ ವಿಜಯ್ ಅವರ ಪೂರ್ಣ ಪ್ರಮಾಣದ ರಾಜಕೀಯ ಪ್ರವೇಶಕ್ಕೂ ಮುನ್ನ ಅವರ ಕೊನೆಯ ಚಿತ್ರವಾಗಿದೆ. ಈ ಸಿನಿಮಾ ಜನವರಿ 9 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಬಿಡುಗಡೆಗೆ ಕೆಲವು ದಿನಗಳ ಮೊದಲು, ಸಿಬಿಎಫ್‌ಸಿ ಅಧ್ಯಕ್ಷರು ಚಿತ್ರದ ಬಗ್ಗೆ ಕೆಲ ಪ್ರಶ್ನೆಗಳನ್ನ ಎತ್ತಿದ್ದು, ಹಾಗಾಗಿ ನಿರ್ಮಾಪಕರು ಮದ್ರಾಸ್ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಜನವರಿ 9 ರಂದು, ನ್ಯಾಯಮೂರ್ತಿ ಪಿ.ಟಿ. ಆಶಾ ಅವರು ಚಿತ್ರಕ್ಕೆ ತಕ್ಷಣವೇ ಯು/ಎ 16+ ಪ್ರಮಾಣಪತ್ರವನ್ನು ನೀಡುವಂತೆ ಸಿಬಿಎಫ್‌ಸಿಗೆ ನಿರ್ದೇಶನ ನೀಡಿದ್ದರು. ಸಿಬಿಎಫ್‌ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್ ಸುಂದರೇಶನ್ ಅವರು ಮುಖ್ಯ ನ್ಯಾಯಾಧೀಶರ ಮುಂದೆ ತುರ್ತು ಪ್ರಸ್ತಾಪವನ್ನು ಮಾಡಿದ್ದರಿಂದ ಮತ್ತೆ ಸಿನಿಮಾ ಬಿಡುಗಡೆಗೆ ತಡೆ ನೀಡಲಾಗಿತ್ತು.. ವಿಭಾಗೀಯ ಪೀಠವು ಏಕ ನ್ಯಾಯಾಧೀಶರ ಆದೇಶವನ್ನು ತಡೆಹಿಡಿದು ಪೊಂಗಲ್ ರಜಾದಿನಗಳ ನಂತರ ಮುಂದಿನ ವಿಚಾರಣೆಗಳನ್ನು ನಿಗದಿಪಡಿಸಿತ್ತು.
ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪ ಮತ್ತು ಪ್ರಸ್ತುತ ಸ್ಥಿತಿ
ನಂತರ ನಿರ್ಮಾಪಕರು ಹೈಕೋರ್ಟ್ ವಿಭಾಗೀಯ ಪೀಠದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆಯ ವೇಗವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ಗೆ ಈ ವಿಷಯವನ್ನು ತ್ವರಿತವಾಗಿ ನಿರ್ಧರಿಸುವಂತೆ ಕೇಳಿತ್ತು. ಹಾಗಾಗಿ ಇದರ ವಿಚಾರಣೆಯನ್ನ ಕೋರ್ಟ್ ಮಾಡುತ್ತಿದ್ದು, 27ರಂದು ತೀರ್ಪು ನೀಡಲಿದೆ.
ಇದನ್ನೂ ಓದಿ: ಒಟಿಟಿಗೆ ಲಗ್ಗೆ ಇಡ್ತಿದೆ 45 ಸಿನಿಮಾ, ನಟ ರಾಜ್ ಹೇಳಿದ್ದೇನು?
