ಗದಗ: ಗುಜರಾತ್ ನ ಸೋಮನಾಥ ದೇವಾಲಯದ ಮೇಲಿನ ದಾಳಿಗೆ ಒಂದು ಸಾವಿರ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಗದಗದ (Gadag) ತ್ರಿಕೂಟೇಶ್ವರ ದೇವಾಲಯದಲ್ಲಿಂದು ಬಿಜೆಪಿ ಕಾರ್ಯಕರ್ತರು ಶಿವನಾಮ ಸ್ಮರಣೆ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ.
ತ್ರಿಕೂಟೇಶ್ವರನಿಗೆ ವಿಶೇಷ ಪೂಜೆ
ಸೋಮನಾಥ ದೇವಾಲಯದ ಮೇಲೆ ಮೊಹಮದ್ ಘಜನಿ ದಾಳಿ ನಡೆಸಿ ಇಂದಿಗೆ ಸಾವಿರ ವರ್ಷ ಕಳೆದಿದ್ದು, ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ತಮ್ಮ ಸ್ವಂತ ಹಣ ಹಾಗೂ ಜನತೆಯ ಸಹಕಾರದಿಂದ ದಾಳಿಗೊಳಗಾಗಿದ್ದ ದೇವಾಲಯಗಳ ಜೀರ್ಣೋದ್ಧಾರ ಮಾಡಿ 75 ವರ್ಷಗಳು ಪೂರೈಸಿದ ನಿಮಿತ್ತ, ದೇಶಾದ್ಯಂತ ಸೋಮನಾಥ ಅಭಿಯಾನ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ತ್ರಿಕೂಟೇಶ್ವರನಿಗೆ ವಿಶೇಷ ಪೂಜೆ ನಡೆಸಲಾಯಿತು. ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ, ಹಿರಿಯ ನಾಯಕ ಎಂ ಎಂ ಹಿರೇಮಠ, ಶ್ರೀಪಾದ ಉಡುಪಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಕೊಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಬೇಕು
ಮಾಧ್ಯಮಗಳ ಜೊತೆ ಮಾತನಾಡಿದ ಎಸ್.ವಿ. ಸಂಕನೂರ ಅವರು, ದೇವಾಲಯಗಳು ಹಿಂದೂ ಧರ್ಮದ ಸಂಸ್ಕೃತಿ, ಸಂಪ್ರದಾಯದ ಪ್ರತೀಕವಾಗಿದ್ದು, ಎಲ್ಲರೂ ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಇನ್ನು, ಸೋಮನಾಥ ದೇವಾಲಯ ಪುನಶ್ಚೇತನ ಅಂಗವಾಗಿ ದೇಶಾದ್ಯಂತ ಸೋಮನಾಥ ಸ್ವಾಭಿಮಾನ ಅಭಿಯಾನ ಹಮ್ಮಿಕೊಂಡು ಶಿವದೇವಾಲಯಕ್ಕೆ ಪೂಜೆ ಸಲ್ಲಿಸುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಶಿವದೇವಾಲಯಗಳಲ್ಲಿ ಪೂಜೆ ನಡೆಸಲಾಗುತ್ತಿದೆ ಎಂದು ರಾಜು ಕುರಡಗಿ ಹೇಳಿದ್ದಾರೆ.
ಅಲ್ಲದೇ, ಈ ಸಮಯದಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ಕೊಳ್ಳಿ, ಮುಸಲ್ಮಾನ ರಾಜರು ಹಿಂದೂ ದೇವಾಲಯ ಧ್ವಂಸ ಮಾಡಿದ್ದರು. ಅಂತಹ ದೇವಾಲಯಗಳ ಅಭಿವೃದ್ಧಿಗೊಳಿಸಿ 75 ವರ್ಷ ಕಳೆದಿದ್ದು, ಎಲ್ಲರೂ ದೇವಾಲಯಗಳಲ್ಲಿ ಧ್ಯಾನ ಭಜನೆ ಮಾಡುವ ಮೂಲಕ ದೇವರ ಸ್ಮರಣೆ, ಅಭಿವೃದ್ಧಿಗೆ ಮುಂದಾಗಬೇಕು ಎಂದಿದ್ದಾರೆ.
