TOP NEWS

Chaluvaraya Swamy: ಮೈತ್ರಿ ಬಿಟ್ಟು ಏಕಾಂಗಿಯಾಗಿ 120 ಸ್ಥಾನ ಗೆದ್ದು ತೋರಿಸಿ: ಎಚ್‌ಡಿ ಕುಮಾರಸ್ವಾಮಿಗೆ ಚಲುವರಾಯಸ್ವಾಮಿ ಮುಖಾಮುಖಿ ಸವಾಲು!

Show Your Strength Alone Chaluvaraya swamy Direct Challenge to HD Kumaraswamy Sparks Political Storm

ಬೆಂಗಳೂರು: “ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಧೈರ್ಯವಿದ್ದರೆ ಬಿಜೆಪಿ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಹೊರಬರಲಿ” ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಬಹಿರಂಗ ಪಂಥಾಹ್ವಾನ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮೈತ್ರಿ ಇಲ್ಲದೆ ಒಂಟಿಯಾಗಿ ಸ್ಪರ್ಧಿಸಿ, ವಿಧಾನಸೌಧದ ಎದುರು ನಿಂತು 120 ಸೀಟುಗಳನ್ನು ಗೆಲ್ಲುವುದಾಗಿ ಘೋಷಿಸಲಿ ಮತ್ತು ಅದನ್ನು ಸಾಧಿಸಿ ತೋರಿಸಲಿ ಎಂದು ಸವಾಲು ಹಾಕಿದರು.

ನಾನು ಕುಮಾರಸ್ವಾಮಿಗೆ ಶರಣಾಗುವೆ

ಒಂದು ವೇಳೆ ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಹೋರಾಡಿ 120 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದರೆ, ನಾವು ಅವರಿಗೆ ಸೆಲ್ಯೂಟ್ ಹೊಡೆದು ಶರಣಾಗಲು ಸಿದ್ಧರಿದ್ದೇವೆ. ಅದನ್ನು ಬಿಟ್ಟು ಬಿಜೆಪಿಯ ಹೆಗಲೇರಿ 20 ಸೀಟುಗಳನ್ನು ಗೆಲ್ಲುವುದರಲ್ಲಿ ಯಾವ ದೊಡ್ಡ ಸಾಧನೆಯಿದೆ ಎಂದು ಅವರು ಲೇವಡಿ ಮಾಡಿದರು. ತಮಿಳುನಾಡಿನ ಮಾಜಿ ಸಿಎಂ ದಿವಂಗತ ಕರುಣಾನಿಧಿ ಅವರ ಪುತ್ರನನ್ನು ನೋಡಿ ರಾಜಕೀಯ ಕಲಿಯಿರಿ. ದೇವೇಗೌಡರ ಮಗನಾಗಿ ನಿಮ್ಮ ಸಾಧನೆಯಾದರೂ ಏನು? ನಿಮ್ಮ ಸಹೋದರ ರೇವಣ್ಣ ಅವರಿಗೆ ಇರುವ ಉದಾರ ಮನಸ್ಸು ಕೂಡ ನಿಮಗಿಲ್ಲ. ಇನ್ನು ಮುಂದೆಯಾದರೂ ಗೌರವಯುತವಾಗಿ ಮಾತನಾಡುವುದನ್ನು ಕಲಿಯಿರಿ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

ನಮಗೆ ಕುಮಾರಸ್ವಾಮಿ ಅವರ ಯಾವುದೇ ಅಭಿನಂದನೆ ಅಥವಾ ಸರ್ಟಿಫಿಕೇಟ್ ಅಗತ್ಯವಿಲ್ಲ. ನಾನು ಎಂದಿಗೂ ಯಾರ ಚಮಚಾಗಿರಿ ಮಾಡಿದವನಲ್ಲ. ಹಿಂದೆ ಇದೇ ಆರ್ಎಸ್ಎಸ್ ಸಂಘಟನೆಯನ್ನು ಹಿಗ್ಗಾಮುಗ್ಗಾ ನಿಂದಿಸಿದ್ದ ನೀವು, ಇಂದು ಅಧಿಕಾರದ ಆಸೆಗಾಗಿ ಅದೇ ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಣಗಾನ ಮಾಡುತ್ತಿದ್ದೀರಿ. ಶಾಸಕ ಬಾಲಕೃಷ್ಣ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಇದು ನಿಮ್ಮ ಗೌರವಕ್ಕೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತೊಬ್ಬ ಒಕ್ಕಲಿಗ ನಾಯಕ ಬೆಳೆಯೋದು ಸಹಿಸೋಕೆ ಆಗುತ್ತಿಲ್ಲ

ರಾಜ್ಯ ರಾಜಕಾರಣದಲ್ಲಿ ಮೊದಲ ಬಾರಿಗೆ ‘ಆಪರೇಷನ್ ಕಮಲ’ಕ್ಕೆ ನಾಂದಿ ಹಾಡಿದ್ದೇ ಕುಮಾರಸ್ವಾಮಿ. ಅವರು ಈ ಹಿಂದೆ ಯಾವ ರೀತಿ ಮುಖ್ಯಮಂತ್ರಿಯಾದರು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ಎಂದಿಗೂ 37 ಸ್ಥಾನಗಳ ಗಡಿಯನ್ನು ದಾಟಿಲ್ಲ. ಸಂವಿಧಾನಾತ್ಮಕವಾಗಿ ಬಹುಮತ ಪಡೆದು ಆಯ್ಕೆಯಾಗಿರುವ ಸಿಎಂ ಎಂದರೆ ಅದು ಡಿ.ಕೆ. ಶಿವಕುಮಾರ್. ಅವರು ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳಾಗಿದೆ. ಅಷ್ಟರಲ್ಲೇ ಒಕ್ಕಲಿಗ ಸಮುದಾಯದ ಮತ್ತೊಬ್ಬ ನಾಯಕ ಬೆಳೆಯುತ್ತಿರುವುದನ್ನು ಸಹಿಸದೆ ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ ಮಾತನಾಡುತ್ತಿದ್ದಾರೆ. ಹಿಂದೆ ಎಸ್‌ಎಂ ಕೃಷ್ಣ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ತಡೆದಿದ್ದೇ ಇವರು, ಇನ್ನು ಡಿ.ಕೆ. ಶಿವಕುಮಾರ್ ಅವರನ್ನು ಇವರು ಒಪ್ಪಿಕೊಳ್ಳಲು ಹೇಗೆ ಸಾಧ್ಯ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: ದಾಖಲೆ ಬರೆದ ಬೆಂಗಳೂರಿನ ಪುಟಾಣಿ: 2 ವರ್ಷ ತುಂಬುವ ಮುನ್ನವೇ 4 ವಿಶ್ವ ದಾಖಲೆ ಬರೆದ ಕಿಕ್ ಸ್ಕೂಟರ್ ಸುಂದರಿ ಅಕೀರಾ!

Leave a Reply

Your email address will not be published. Required fields are marked *