ಬೆಂಗಳೂರು: ಮಲಯಾಳಂನ ಜನಪ್ರಿಯ ನಟಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್ (Actor Dileep) ಅವರನ್ನ ಕೋರ್ಟ್ ಖುಲಾಸೆ ಮಾಡಿದ್ದು, ಸರಿಯಾದ ಸಾಕ್ಷಿಗಳು ಲಭಿಸದ ಕಾರಣ ಕೋರ್ಟ್ ಈ ಆದೇಶ ನೀಡಿದೆ ಎನ್ನಲಾಗಿದೆ.
ಏನಿದು ಪ್ರಕರಣ?
2017ರ ಫೆಬ್ರವರಿ 17ರ ರಾತ್ರಿ ಮಲಯಾಳಂ ನಟಿಯೊಬ್ಬರು ತ್ರಿಶೂರ್ ನಿಂದ ಕೊಚ್ಚಿಗೆ ತಮ್ಮ ಕಾರಿನಲ್ಲಿ ಚಿತ್ರೀಕರಣಕ್ಕಾಗಿ ಪ್ರಯಾಣಿ ಮಾಡುತ್ತಿದ್ದರು. ಈ ಸಮಯದಲಲಿ ಮಾರ್ಗಮಧ್ಯೆ ಅವರ ಕಾರನ್ನು ಹಿಂಬಾಲಿಸಿದ ದುಷ್ಕರ್ಮಿಗಳ ಗುಂಪೊಂದು, ಕಾರನ್ನು ಅಡ್ಡಗಟ್ಟಿ ಒಳನುಗ್ಗಿತ್ತು. ಚಲಿಸುತ್ತಿದ್ದ ಕಾರಿನಲ್ಲೇ ಸುಮಾರು ಎರಡು ಗಂಟೆಗಳ ಕಾಲ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ನಂತರ ನಟಿಯನ್ನು ನಿರ್ದೇಶಕರೊಬ್ಬರ ಮನೆಯ ಬಳಿ ಇಳಿಸಿ ಪರಾರಿಯಾಗಿದ್ದರು.
ಹೇಳಿಕೆ ಬದಲಿಸಿದ ಸಾಕ್ಷಿಗಳು
ಆದರೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರಮುಖ ಆರೋಪಿ ‘ಪಲ್ಸರ್ ಸುನಿ’ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆತ ಜೈಲಿನಿಂದ ಬರೆದ ಪತ್ರ ನಂತರ ಈ ಪ್ರಕರಣಕ್ಕೆ ದೊಡ್ಡ ತಿರುವನ್ನ ನೀಡಿತ್ತು. ಆ ಪತ್ರದ ಈ ಪ್ರಕರಣದ ಹಿಂದೆ ದೊಡ್ಡ ಜನರ ಕೈವಾಡ ಇರುವ ಬಗ್ಗೆ ಸುಳಿವನ್ನ ನೀಡಿತ್ತು. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದಿಲೀಪ್ ಅವರ ಹೆಸರು ಕೇಳಿ ಬಂದಿತ್ತು. ಮಾಹಿತಿಗಳ ಪ್ರಕಾರ, ನಟ ದಿಲೀಪ್ ಹಾಗೂ ಕಾವ್ಯ ಮೆನನ್ ಅವರ ಸಂಬಂಧದ ಬಗ್ಗೆ ಸಂತ್ರಸ್ತ ನಟಿ ದಿಲೀಪ್ ಅವರ ಪತ್ನಿಯಾಗಿದ್ದ, ಮಂಜು ವಾರಿಯರ್ ಅವರಿಗೆ ಮಾಹಿತಿ ನೀಡಿದ್ದ ಕಾರಣದಿಂದ ದಿಲೀಪ್ ಅವರು ಈ ಕೆಲಸ ಮಾಡಿಸಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಇದೀಗ ಸುಮಾರು 8 ವರ್ಷಗಳ ವಿಚಾರಣೆಯಲ್ಲಿ, ಪ್ರಾಸಿಕ್ಯೂಷನ್ ಪರವಿದ್ದ ಅನೇಕ ಸಾಕ್ಷಿಗಳು ವಿಚಾರಣೆ ವೇಳೆ ತಮ್ಮ ಹೇಳಿಕೆಯನ್ನ ಬದಲಾಯಿಸಿದ್ದು, ಇದರಿಂದ ದಿಲೀಪ್ ಅವರ ವಿರುದ್ದ ಯಾವುದೇ ಸಾಕ್ಷ್ಯಾಧಾರಗಳು ಸರಿಯಾಗಿ ಲಭಿಸಿಲ್ಲ. ಹಾಗಾಗಿ ಅವರನ್ನ ಈ ಪ್ರಕರಣದಿಂದ ಖುಲಾಸೆ ಮಾಡಲಾಗಿದೆ. ಆದರೆ ಕೃತ್ಯ ಎಸಗಿದ ಪಲ್ಸರ್ ಸುನಿ ಮತ್ತು ಆತನ ಸಹಚರರನ್ನು ದೋಷಿಗಳೆಂದು ತೀರ್ಪು ನೀಡಿದೆ. ಆದರೆ ಈ ತೀರ್ಪು ಅನೇಕರ ಕೋಪಕ್ಕೆ ಕಾರಣವಾಗಿದ್ದು, ಸಂತ್ರಸ್ತ ನಟಿಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿ, ಕಾಂತಾರ ಯಶಸ್ಸಿನ ಹಿನ್ನಲೆ ಹರಕೆ ತೀರಿಸಿದ ನಟ
