TOP NEWS

Priyank Kharge: ನಿಮ್ಮ ಕಾಲದಲ್ಲಿ ಜೈಲುಗಳೇ ಅತಿಥಿಗೃಹಗಳಾಗಿದ್ದವು: ಕಟು ಟೀಕೆಗಳಿಗೆ ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ

Jail Officials Suspended After Kalaburagi Escape Priyank kharge says

ಕಲಬುರಗಿ: ಇಲ್ಲಿನ ಕೇಂದ್ರ ಜೈಲಿನ ಎತ್ತರದ ಆವರಣ ಗೋಡೆಯನ್ನು ಮಧ್ಯರಾತ್ರಿಯ ವೇಳೆಗೆ ಸಿನಿಮೀಯ ರೀತಿಯಲ್ಲಿ ಜಿಗಿದು ಕೈದಿಯೊಬ್ಬ ಪರಾರಿಯಾದ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ (Priyank Kharge) ಅವರು ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ. ಕಾರಾಗೃಹದ ಬಿಗಿ ಭದ್ರತೆಯ ನಡುವೆಯೂ ನಡೆದಿರುವ ಈ ಭದ್ರತಾ ಲೋಪದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಮಾತನಾಡಿದ್ದಾರೆ.

ಅಧಿಕಾರಿಗಳ ಅಮಾನತು

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದು, ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂರು ಖೈದಿಗಳು ತಪ್ಪಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದಕ್ಕಾಗಿ ಸಂಬಂಧಿಸಿದ ಜೈಲಾಧಿಕಾರಿ ಮತ್ತು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ, ಹಾಗೂ ತಪ್ಪಿಸಿಕೊಂಡ ಖೈದಿಗಳನ್ನು ಸೆರೆಗಾಗಿ ಪರಿಣಾಮಕಾರಿ ಕ್ರಮಗಳನ್ನು ಅನುಸರಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು, ಪರಿಣಾಮವಾಗಿ ಓರ್ವ ಖೈದಿಯನ್ನು ಸೆರೆ ಹಿಡಿಯಲಾಗಿದೆ. ನಾನು ಗೃಹಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಗೃಹ ಇಲಾಖೆಯ ಪ್ರತಿ ವಿಭಾಗಗಳ ಪರಿಶೀಲನಾ ಸಭೆ ನಡೆಸಿ, ಆ ಎಲ್ಲಾ ವಿಭಾಗಗಳ ಬಲವರ್ಧನೆಗೆ, ಉನ್ನತಿಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

ಬಿಜೆಪಿ ವಿರುದ್ದ ವಾಗ್ದಾಳಿ
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಾರಾಗೃಹಗಳ ಸ್ಥಿತಿಗತಿಗಳ ಪರಿಶೀಲನೆ ಮತ್ತು ಬಂಧಿಖಾನೆ ಸಿಬ್ಬಂದಿಗಳ ಕಾರ್ಯಕ್ಷಮತೆಯ ಪರಿಶೀಲನೆ ನಡೆಸಲಿದ್ದೇನೆ. ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯ ಉನ್ನತಿಕರಣ ಮತ್ತು ಅಕ್ರಮಗಳಿಗೆ ಕಡಿವಾಣದಂತಹ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಟೀಕೆಗಳಿಗೆ ಬಾಯ್ತೆರೆದು ಕುಳಿತಿರುವ ಬಿಜೆಪಿ ನಾಯಕರು ಒಮ್ಮೆ ತಮ್ಮ ಅವಧಿಯಲ್ಲಿ ರಾಜ್ಯದ ಜೈಲುಗಳ ಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕನ ಮಾಡಿಕೊಂಡರೆ ಒಳಿತು, 2010ರಲ್ಲಿ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಖೈದಿಗಳು ಪರಾರಿಯಾಗಿದ್ದರು. ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಪ್ರಕರಣ ಎಂದು ಪರಿಗಣಿಸಬಹುದು. ಇದು ಅಂದಿನ ಗೃಹಸಚಿವರ ವೈಫಲ್ಯವೆಂದು ಬಿಜೆಪಿ ಹೇಳುತ್ತದೆಯೇ? ಬಿಜೆಪಿ ಅವಧಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಅತಿಥಿ ಗೃಹವಾಗಿ ಬದಲಾಗಿ ಖೈದಿಗಳಿಗೆ ಸಕಲ ಸವಲತ್ತುಗಳು ದೊರಕುತ್ತಿದ್ದ ಸುದ್ದಿಗಳನ್ನು ರಾಜ್ಯ ನೋಡಿದೆ. ಇದು ಬಿಜೆಪಿ ಸರ್ಕಾರದ ವೈಫಲ್ಯ ಎಂಬುದನ್ನು ಒಪ್ಪಿಕೊಳ್ಳುತ್ತಾರಾ?

ಎಸ್ಕೇಪ್‌ ಆಗಿದ್ದ ಮೂವರಲ್ಲಿ ಒಬ್ಬನ ಬಂಧನ

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದ ಗಗನಚುಂಬಿ ಆವರಣ ಗೋಡೆ ಜಿಗಿದು ಮಧ್ಯರಾತ್ರಿಯ ವೇಳೆ ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದ ಮೂವರು ಅಪಾಯಕಾರಿ ಕೈದಿಗಳ ಪೈಕಿ ಓರ್ವನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಸಿನೆಮಾ ಶೈಲಿಯಲ್ಲೇ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸಂತೋಷ್ ಎಂದು ಗುರುತಿಸಲಾಗಿದ್ದು, ಈತನನ್ನು ಬೀದರ್ ಜಿಲ್ಲೆಯ ಹುಮನಾಬಾದ್ ವ್ಯಾಪ್ತಿಯಲ್ಲಿ ತೀವ್ರ ಕಾರ್ಯಾಚರಣೆಯ ನಡೆಸಿ ಹಿಡಿಯಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡಿದ್ದ ಈತ ಪೊಲೀಸರ ಕಣ್ತಪ್ಪಿಸಿ ಕಲಬುರಗಿಯಿಂದ ಬೀದರ್ ಮಾರ್ಗವಾಗಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ. ಈ ಬಗ್ಗೆ ನಿಖರ ಸುಳಿವು ಬೆನ್ನತ್ತಿದ ಹುಮನಾಬಾದ್ ಪೊಲೀಸರು ತಕ್ಷಣ ಅಲರ್ಟ್ ಆಗಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಹುಮನಾಬಾದ್‌ನ ಆರ್‌ಟಿಓ ವೃತ್ತದ ಬಳಿ ಅನುಮಾನಾಸ್ಪದ ಬಸ್ ತಡೆದು ತಪಾಸಣೆ ನಡೆಸುತ್ತಿದ್ದಾಗ ಪೊಲೀಸರನ್ನು ಕಂಡು ಸಂತೋಷ್ ಓಡಲು ಮುಂದಾಗಿದ್ದಾನೆ. ಈ ವೇಳೆ ಆತನನ್ನು ಹಿಡಿಯಲು ಹೋದ ಸಿಬ್ಬಂದಿಯ ಮೇಲೆಯೇ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ನಿಷ್ಕ್ರಿಯಗೊಳಿಸಿ ವಶಕ್ಕೆ ಪಡೆದಿದ್ದಾರೆ. ಕೊಲೆ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಈತನನ್ನು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಸದ್ಯ ಕಲಬುರಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಮಂಗಳವಾರ ಮಧ್ಯರಾತ್ರಿ ಸುಮಾರು 3 ಗಂಟೆಯ ಸುಮಾರಿಗೆ ಜೈಲಿನ ಬಿಗಿ ಕಾವಲನ್ನು ಭೇದಿಸಿ ಮಸ್ತಾನ್, ಸಂತೋಷ್ ಮತ್ತು ಸಾಗರ್ ಎಂಬ ಮೂವರು ಕೈದಿಗಳು ನಾಪತ್ತೆಯಾಗಿದ್ದರು. ಇವರೆಲ್ಲರೂ ಬೀದರ್ ಮೂಲದ ಕೊಲೆ ಕೇಸೊಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳಾಗಿದ್ದಾರೆ. ಸದ್ಯ ಸಂತೋಷ್ ಸಿಕ್ಕಿಬಿದ್ದಿದ್ದು, ಇನ್ನುಳಿದ ಇಬ್ಬರು ಸಹಚರರಾದ ಮಸ್ತಾನ್ ಹಾಗೂ ಸಾಗರ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ತೀವ್ರ ಜಾಲ ನೆಯ್ದಿದ್ದಾರೆ.

ಇನ್ನು, ಹೈ-ಸೆಕ್ಯುರಿಟಿ ವಲಯವೆನಿಸಿಕೊಂಡಿರುವ ಕೇಂದ್ರ ಕಾರಾಗೃಹದ ಕೋಟೆಯನ್ನೇ ಭೇದಿಸಿ ಕೈದಿಗಳು ಪಲಾಯನ ಮಾಡಿರುವುದು ಇಡೀ ವ್ಯವಸ್ಥೆಯ ಮೇಲೆಯೇ ಸಾಲು ಸಾಲು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಹಗರಣದ ಹಿಂದೆ ಜೈಲಿನ ಒಳಗಿನ ಸಿಬ್ಬಂದಿಯ ಶಾಮೀಲಾತಿ ಇರುವ ಬಲವಾದ ಶಂಕೆ ವ್ಯಕ್ತವಾಗಿದೆ. ಮಧ್ಯರಾತ್ರಿಯ ವೇಳೆಗೆ ಕಟ್ಟುನಿಟ್ಟಾಗಿ ಸೆರೆಮನೆಯ ಕೋಣೆಯೊಳಗೆ ಇರಬೇಕಾದ ಇಂತಹ ಕುಖ್ಯಾತ ಅಪರಾಧಿಗಳು ಮುಕ್ತವಾಗಿ ಹೊರಬರಲು ಹೇಗೆ ಸಾಧ್ಯವಾಯಿತು ಎಂಬ ಗಂಭೀರ ಪ್ರಶ್ನೆ ಎದ್ದಿದೆ. ಕರ್ತವ್ಯ ಲೋಪ ಎಸಗಿದ ಹಾಗೂ ಕೈದಿಗಳಿಗೆ ಪರೋಕ್ಷವಾಗಿ ನೆರವು ನೀಡಿದ ಆರೋಪದ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧವೂ ತನಿಖೆ ಆರಂಭವಾಗಿದ್ದು, ಈ ಇಡೀ ಪ್ರಸಂಗಕ್ಕೆ ಸಂಬಂಧಿಸಿದಂತೆ ಫರ್ತಾಬಾದ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 15 ನಿಮಿಷಗಳಲ್ಲಿ 108 ಆ್ಯಂಬುಲೆನ್ಸ್ ಬರದಿದ್ದರೆ ₹5,000 ಭಾರಿ ದಂಡ: ರಾಜ್ಯ ಸರ್ಕಾರದ ಬಿಗ್ ನಿರ್ಧಾರ

Leave a Reply

Your email address will not be published. Required fields are marked *