ಬೆಂಗಳೂರು: ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC), ನಷ್ಟದ ಸುಳಿಯಿಂದ ಹೊರಬರಲು ಇದೀಗ ವಿನೂತನ ಆದಾಯ ಮೂಲದ ಮೊರೆ ಹೋಗಿದೆ. ಬಸ್‌ಗಳ ಬಾಡಿ ಹಾಗೂ ಟಿಕೆಟ್‌ಗಳ ಹಿಂಭಾಗವನ್ನು ಕಮರ್ಷಿಯಲ್ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿರುವ ನಿಗಮ, ಈಗ ಬಸ್ಸುಗಳ ಒಳಗಿರುವ ಸ್ಪೀಕರ್‌ಗಳ ಮೂಲಕ ಧ್ವನಿ (ಆಡಿಯೋ) ಜಾಹೀರಾತುಗಳನ್ನು ಬಿತ್ತರಿಸಲು ಯೋಜನೆ ರೂಪಿಸಿದೆ. ದೇಶದಲ್ಲೇ ಮೊದಲ ಎನ್ನಲಾದ ಈ ಪ್ರಯೋಗಕ್ಕೆ ಪ್ರಯಾಣಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಕೋಟಿ ಕೋಟಿ ಕಮಾಯಿ ಮಾಡಲು ಸಾರಿಗೆ ಇಲಾಖೆ ಕಸರತ್ತು
ಡೀಸೆಲ್ ಬೆಲೆ ಏರಿಕೆ ಹಾಗೂ ಸರ್ಕಾರದ ‘ಶಕ್ತಿ’ ಉಚಿತ ಪ್ರಯಾಣ ಯೋಜನೆಯ ಸಬ್ಸಿಡಿ ಹಣ ಸಕಾಲಕ್ಕೆ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬಿಎಂಟಿಸಿ ಆರ್ಥಿಕವಾಗಿ ಕಂಗೆಟ್ಟಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಈಗಾಗಲೇ ಪ್ರಯಾಣ ದರ ಹೆಚ್ಚಳಕ್ಕೂ ಸರ್ಕಾರದ ಅನುಮತಿ ಕೋರಲಾಗಿದೆ. ಪ್ರಸ್ತುತ ಸಂಸ್ಥೆಯ ಬಳಿ 6,800ಕ್ಕೂ ಹೆಚ್ಚು ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಸ್‌ಗಳಿದ್ದು, ನಿತ್ಯ ಸುಮಾರು 45 ಲಕ್ಷ ಮಂದಿ ಇವುಗಳಲ್ಲಿ ಸಂಚರಿಸುತ್ತಾರೆ. ಈ ಬೃಹತ್ ಸಂಖ್ಯೆಯ ಗ್ರಾಹಕರನ್ನು ತಲುಪುವ ಮೂಲಕ ಕೋಟ್ಯಂತರ ರೂಪಾಯಿ ರಾಜಸ್ವ ಗಳಿಸುವುದು ನಿಗಮದ ಲೆಕ್ಕಾಚಾರವಾಗಿದೆ. ಈ ಆಡಿಯೋ ಜಾಹೀರಾತಿನ ಪ್ರಸ್ತಾವನೆಯನ್ನು ಈಗಾಗಲೇ ಸಾರಿಗೆ ಸಚಿವರ ಅಂಗಳಕ್ಕೆ ತಲುಪಿಸಲಾಗಿದ್ದು, ಶೀಘ್ರದಲ್ಲೇ ಒಪ್ಪಿಗೆ ಸಿಗುವ ಸಾಧ್ಯತೆಯಿದೆ.
ನೆಮ್ಮದಿಯ ಪ್ರಯಾಣಕ್ಕೆ ಕುತ್ತು ತರುತ್ತಾ ಶಬ್ದ ಮಾಲಿನ್ಯ?
ಬಿಎಂಟಿಸಿಯ ಈ ಹೊಸ ಕಮರ್ಷಿಯಲ್ ಆಲೋಚನೆಗೆ ದೈನಂದಿನ ಪ್ರಯಾಣಿಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಈಗಾಗಲೇ ನಗರದ ಟ್ರಾಫಿಕ್ ಹಾಗೂ ಬಸ್‌ಗಳ ರಶ್‌ನಿಂದಾಗಿ ಪ್ರಯಾಣಿಕರು ಸುಸ್ತಾಗಿರುತ್ತಾರೆ. ಇದರ ನಡುವೆ ಬಸ್ಸಿನೊಳಗೆ ನಿರಂತರವಾಗಿ ಸ್ಪೀಕರ್ ಮೂಲಕ ಜಾಹೀರಾತುಗಳನ್ನು ಪ್ಲೇ ಮಾಡಿದರೆ ನೆಮ್ಮದಿಯ ಪ್ರಯಾಣಕ್ಕೆ ಭಂಗ ಬರಲಿದೆ ಎನ್ನುವುದು ಸಾರ್ವಜನಿಕರ ದೂರು.
“ಬಸ್‌ಗಳನ್ನು ಅವಲಂಬಿಸಿರುವುದು ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದ ಜನ. ಜನದಟ್ಟಣೆಯಿಂದಾಗಿ ಬಸ್‌ಗಳಲ್ಲಿ ಈಗಾಗಲೇ ಗದ್ದಲದ ವಾತಾವರಣವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸತತವಾಗಿ ಆಡಿಯೋ ಜಾಹೀರಾತುಗಳನ್ನು ಹಾಕುತ್ತಾ ಹೋದರೆ, ಮುಂದಿನ ನಿಲ್ದಾಣ ಯಾವುದು ಎಂಬುದೇ ತಿಳಿಯದಂತೆ ಗೊಂದಲ ಸೃಷ್ಟಿಯಾಗುತ್ತದೆ.” — ಆಕ್ರೋಶಿತ ಬಿಎಂಟಿಸಿ ಪ್ರಯಾಣಿಕರು
ಒಂದು ಕಡೆ ಆರ್ಥಿಕ ರಕ್ಷಣೆಗಾಗಿ ಬಿಎಂಟಿಸಿ ಇಂತಹ ಮಾರ್ಗಗಳನ್ನು ಹುಡುಕುತ್ತಿದ್ದರೆ, ಮತ್ತೊಂದೆಡೆ ಪ್ರಯಾಣಿಕರು ಮಾತ್ರ ಬಸ್ಸಿನೊಳಗಿನ ಈ ‘ಶಬ್ದ ಮಾಲಿನ್ಯ’ದ ಯೋಜನೆಗೆ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಯಶವಂತಪುರ ವಿಧಾನಸಭೆ ಕ್ಷೇತ್ರದಲ್ಲಿ SIR ಅಕ್ರಮ; ಹೆಚ್.ಡಿ.ಕುಮಾರಸ್ವಾಮಿ ಆರೋಪ
