TOP NEWS

Seemanth Kumar: ಅಶಿಸ್ತು ತೋರಿದರೆ ಪೊಲೀಸ್ ಸಿಬ್ಬಂದಿ ವಜಾ: ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖಡಕ್ ವಾರ್ನಿಂಗ್!

No Tolerance For Indiscipline seemath kumar Warns Of Direct Dismissal For Errant Officers

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಅಶಿಸ್ತು ತೋರುವ ಯಾವುದೇ ದರ್ಜೆಯ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಮುಲಾಜಿಲ್ಲದೆ ಸೇವೆಯಿಂದ ವಜಾ ಮಾಡಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ (Seemanth Kumar) ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆಡುಗೋಡಿಯ ಸಿಎಆರ್‌ ದಕ್ಷಿಣ ಕವಾಯಿತು ಮೈದಾನದಲ್ಲಿ ನಡೆದ ಮಾಸಿಕ ಪರೇಡ್‌ ವೀಕ್ಷಿಸಿ ಅವರು ಮಾತನಾಡಿದರು.

ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ

ಕರ್ತವ್ಯ ಲೋಪ ಎಸಗುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಅಮಾನತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಶಿಸ್ತು ಪ್ರದರ್ಶಿಸಿದ ಕೆಲವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

‘ನಮ್ಮ 112’ ಸೇವೆಗೆ ಪ್ರಶಂಸೆ

ತುರ್ತು ಸ್ಪಂದನಾ ಸಹಾಯವಾಣಿ ‘ನಮ್ಮ 112’ ಕಾರ್ಯಕ್ಷಮತೆ ಬಗ್ಗೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು. “ಹಿಂದೆ ಘಟನಾ ಸ್ಥಳಕ್ಕೆ ತಲುಪಲು 13 ನಿಮಿಷ ಬೇಕಾಗುತ್ತಿತ್ತು. ಆದರೆ ಈಗ ಕೇವಲ 6 ನಿಮಿಷ 30 ಸೆಕೆಂಡುಗಳಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸುವುದು ಅತ್ಯಂತ ಮುಖ್ಯವಾಗಿದ್ದು, ಇದೊಂದು ಸ್ಲಾಘನೀಯ ಬೆಳವಣಿಗೆ” ಎಂದರು.

ಮಾದಕ ವಸ್ತುಗಳ ವಿರುದ್ಧ ಜಂಟಿ ಹೋರಾಟ

ಅಂತರರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ರಾಜ್ಯ ಸರ್ಕಾರ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಚಾಲನೆ ನೀಡಿರುವ ‘ರೈಸ್’ (RISE) ಮತ್ತು ‘ಬೇಡ ಬ್ರೋ’ ಅಭಿಯಾನಗಳಲ್ಲಿ ಇಲಾಖೆಯ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

  • ಎಲ್ಲಾ ಘಟಕಗಳಿಗೂ ಸೂಚನೆ: ಸಂಚಾರಿ ಪೊಲೀಸ್, ಸಿಎಆರ್ ಸೇರಿದಂತೆ ಯಾವುದೇ ವಿಭಾಗದ ಸಿಬ್ಬಂದಿ ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಕೂರಬಾರದು. ಕಾನ್‌ಸ್ಟೇಬಲ್‌ನಿಂದ ಹಿಡಿದು ಕಮಿಷನರ್‌ವರೆಗೆ ಎಲ್ಲರೂ ಡ್ರಗ್ಸ್ ಮುಕ್ತ ಅಭಿಯಾನದಲ್ಲಿ ಭಾಗಿಯಾಗಬೇಕು.
  • ನಿರಂತರ ನಿಗಾ: ನಗರದಲ್ಲಿರುವ 20 ಸಾವಿರ ಪೊಲೀಸ್ ಸಿಬ್ಬಂದಿಯೂ ತಮ್ಮ ಕರ್ತವ್ಯದ ಅವಧಿಯಲ್ಲಿ ಮಾದಕ ವಸ್ತು ಸೇವನೆ, ಸಾಗಾಟ ಅಥವಾ ಮಾರಾಟ ಕಂಡುಬಂದರೆ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು.
  • ದೊಡ್ಡ ಪ್ರಮಾಣದ ಜಪ್ತಿ: ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕರಿಗೆ ಸ್ಪಂದಿಸಬೇಕು. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 350 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಕಾರ್ಯಾಚರಣೆ ನಿರಂತರವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಸಿಬ್ಬಂದಿ ಕಾರ್ಯಕ್ಷಮತೆಗೆ ಶ್ಲಾಘನೆ

ಸರ್ಕಾರ ಬದಲಾವಣೆಯ ಸಂದರ್ಭದಲ್ಲಿ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯದಂತೆ ಇಲಾಖೆಯ ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ. ಇದೊಂದು ಸವಾಲಿನ ಕೆಲಸವಾಗಿತ್ತು ಎಂದ ಆಯುಕ್ತರು, ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲೂ ಇದೇ ರೀತಿ ಸೂಕ್ತ ಬಂದೋಬಸ್ತ್ ಕೈಗೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ: SIR ಪ್ರಕ್ರಿಯೆ ಮುಗಿದ ನಂತರ ಮುಂಗಾರು ಅಧಿವೇಶನ: ಸಿಎಂ ಡಿಕೆ ಶಿವಕುಮಾರ್‌

Leave a Reply

Your email address will not be published. Required fields are marked *