TOP NEWS

G Parameshwar: ವಿಧಾನಸೌಧದಲ್ಲಿ ಪ್ರತ್ಯಕ್ಷರಾದ ಜಿ. ಪರಮೇಶ್ವರ್; ಕಂದಾಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ

DCM G Parameshwar strict orders to officers regarding work

ಬೆಂಗಳೂರು: ಇತ್ತೀಚೆಗೆ ತೀವ್ರ ವೈರಲ್ ಸೋಂಕಿನಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ (G Parameshwar) ಅವರು ವೈದ್ಯರ ನಿರ್ದೇಶನದಂತೆ ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ಅನಾರೋಗ್ಯದ ನಡುವೆಯೂ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ್ದರು. ಇದೀಗ ಸುಮಾರು ಒಂದು ವಾರದ ಬಿಡುವಿನ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇಲಾಖೆಯ ಕರ್ತವ್ಯದ ನಿಮಿತ್ತ ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ಅವರು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಇಲಾಖೆಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಖಾಲಿ ಹುದ್ದೆಗಳ ಭರ್ತಿಗೆ ವೇಗ

ಸಭೆಯಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿಯನ್ನು ಚುರುಕುಗೊಳಿಸುವಂತೆ ಸೂಚಿಸಿದ ಡಿಸಿಎಂ, ಜಿಲ್ಲಾ ಮತ್ತು ತಾಲೂಕು ಮಟ್ಟದ ಆಡಳಿತ ಯಂತ್ರವು ಸಾರ್ವಜನಿಕರ ಅರ್ಜಿ ಹಾಗೂ ಅಹವಾಲುಗಳಿಗೆ ತಕ್ಷಣವೇ ಸ್ಪಂದಿಸಬೇಕು ಎಂದು ತಿಳಿಸಿದರು. ಇಲಾಖೆಯಲ್ಲಿ ದೀರ್ಘಕಾಲದಿಂದ ಖಾಲಿ ಬಿದ್ದಿರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ವೇಗ ನೀಡಬೇಕು ಹಾಗೂ ಸಿಬ್ಬಂದಿಗಳ ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಕಾಲಹರಣ ಮಾಡಬಾರದು ಎಂದು ತಾಕೀತು ಮಾಡಿದರು. ಜೇಷ್ಠತಾ ಪಟ್ಟಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿ, ನಿಯಮಾವಳಿಗಳ ಪ್ರಕಾರ ಅತ್ಯಂತ ಪಾರದರ್ಶಕವಾಗಿ ಅರ್ಹ ಸಿಬ್ಬಂದಿಗೆ ಪ್ರಮೋಷನ್ ನೀಡುವಂತೆ ನಿರ್ದೇಶನ ನೀಡಿದರು.

ಇಲಾಖೆಯ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಸಹಾಯಕ ಆಯುಕ್ತರಿಗೆ (AC) ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಬೇಕು ಮತ್ತು ಕಚೇರಿಗಳಲ್ಲಿ ಧೂಳು ಹಿಡಿಯುತ್ತಿರುವ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು ಎಂದು ಅವರು ಹೇಳಿದರು. ಪರವಾನಗಿ ಭೂಮಾಪಕರ (License Surveyors) ದೀರ್ಘಕಾಲದ ಸಮಸ್ಯೆಗಳನ್ನು ಆಲಿಸಲು ಪ್ರತ್ಯೇಕ ಸಭೆಯೊಂದನ್ನು ಆಯೋಜಿಸಬೇಕು ಹಾಗೂ ಅವರ ವೃತ್ತಿಪರ ಬೇಡಿಕೆಗಳಿಗೆ ಕಾನೂನಾತ್ಮಕವಾಗಿ ತ್ವರಿತ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕಾಲಮಿತಿಯೊಳಗೆ ಸೌಲಭ್ಯ ಜನರಿಗೆ ತಲುಪಬೇಕು

ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ತರಲು ಇ-ಪೌತಿ ಖಾತೆ ಸೇರಿದಂತೆ ಇಲಾಖೆಯ ಎಲ್ಲಾ ಆನ್‌ಲೈನ್ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ಜನರಿಗೆ ತಲುಪಿಸಬೇಕು. ಸಣ್ಣಪುಟ್ಟ ಕೆಲಸಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ದುಸ್ಥಿತಿಯನ್ನು ತಪ್ಪಿಸಬೇಕು. ಭೂದಾಖಲೆಗಳು, ಸರ್ವೇ ಕಾರ್ಯ, ಖಾತೆ ಬದಲಾವಣೆ ಹಾಗೂ ಮ್ಯುಟೇಷನ್ ಪ್ರಕ್ರಿಯೆಗಳಲ್ಲಿ ಉಂಟಾಗುವ ವಿಳಂಬ ನೀತಿಯನ್ನು ತಡೆಗಟ್ಟಲು ಹಿರಿಯ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸಬೇಕು. ಇಲಾಖೆಯ ಪ್ರತಿಯೊಂದು ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲು ಜಿ. ಪರಮೇಶ್ವರ್ ಅಧಿಕಾರಿಗಳಿಗೆ ದಿಶೆ ತೋರಿಸಿದರು.

ಇದನ್ನೂ ಓದಿ: 20 ಸಾವಿರ ಕಿಕ್‌ಬ್ಯಾಕ್ ಪಡೆದು ಸಿಕ್ಕಿಬಿದ್ದಿದ್ದ ಯಡ್ರಾಮಿ ಪೊಲೀಸರಿಗೆ ಇಲ್ಲ ಬಿಡುಗಡೆ; ಜಾಮೀನು ತಳ್ಳಿಹಾಕಿದ ನ್ಯಾಯಾಲಯ

Leave a Reply

Your email address will not be published. Required fields are marked *