ಬೆಂಗಳೂರು: ರಾಜಧಾನಿಯ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ನಮ್ಮ ಮೆಟ್ರೋ ಮೂರನೇ ಹಂತದ (Namma Metro) ಯೋಜನೆಗೆ ಗ್ರೌಂಡ್ ವರ್ಕ್ ಆರಂಭವಾಗುತ್ತಿದ್ದಂತೆಯೇ, ಇತ್ತ ಸಿಲಿಕಾನ್ ಸಿಟಿಯ ಪರಿಸರಕ್ಕೆ ದೊಡ್ಡ ಮಟ್ಟದ ಕಂಟಕ ಎದುರಾಗಿದೆ. ಈ ಹೊಸ ಮೆಟ್ರೋ ಲೈನ್ ಕಾಮಗಾರಿಗಾಗಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಒಟ್ಟು 3,627 ಮರಗಳನ್ನು ಧರಾಶಾಹಿ ಮಾಡಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ಧರಿಸಿದೆ. ಮರಗಳ ತೆರವು ಕಾರ್ಯಾಚರಣೆಗೆ ಅನುಮತಿ ಕೋರಿ ಬಿಎಂಆರ್‌ಸಿಎಲ್ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅರಣ್ಯ ವಿಭಾಗಕ್ಕೆ ಪ್ರಸ್ತಾವನೆ ಸಾಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಬಿಎ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಮರಗಳನ್ನು ಕಡಿಯುವ ಕುರಿತು ಸಾರ್ವಜನಿಕರು ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ ನಿಗದಿಪಡಿಸಿದೆ.
ಎಲ್ಲೆಲ್ಲಿ ಮರಗಳ ಮಾರಣ ಹೋಮ?
ಮೂರನೇ ಹಂತದ ಮೆಟ್ರೋ ನಿಲ್ದಾಣಗಳು, ಟ್ರ್ಯಾಕ್‌ಗಳು (ವಯಾಡಕ್ಟ್) ಹಾಗೂ ಅತ್ಯಾಧುನಿಕ ಡಬಲ್ ಡೆಕ್ಕರ್ ಮೇಲ್ಸೇತುವೆಗಳ ನಿರ್ಮಾಣಕ್ಕಾಗಿ ಇಷ್ಟೊಂದು ಬೃಹತ್ ಸಂಖ್ಯೆಯ ಹಸಿರನ್ನು ನಾಶಮಾಡಲಾಗುತ್ತಿದೆ. ಕತ್ತರಿಸಲು ಉದ್ದೇಶಿಸಲಾದ ಮರಗಳಲ್ಲಿ 2,426 ವಿವಿಧ ಜಾತಿಯ ನೆರಳು ನೀಡುವ ದೊಡ್ಡ ಮರಗಳಾಗಿದ್ದರೆ, ಉಳಿದ 1,201 ಅಡಕೆ ಮರಗಳಾಗಿವೆ. ನಾಗರಿಕರಿಂದ ಬರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಬಳಿಕವೇ ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯ ಸಂರಕ್ಷಣಾ ವಿಭಾಗ ತಿಳಿಸಿದೆ. ಈ ಹಸಿರು ನಾಶದ ಪ್ರಕ್ರಿಯೆಯಿಂದಾಗಿ ನಗರದ ಹೊಸಹಳ್ಳಿ, ಮಾಗಡಿ ರಸ್ತೆ, ಕಾಮಾಕ್ಷಿಪಾಳ್ಯ, ಕೆಹೆಚ್‌ಬಿ ಲೇಔಟ್, ಸುಮನಹಳ್ಳಿ ಜಂಕ್ಷನ್, ಸುಂಕದಕಟ್ಟೆ, ಬ್ಯಾಡರಹಳ್ಳಿ, ಹೇರೋಹಳ್ಳಿ ಮತ್ತು ಕಡಬಗೆರೆ ಸುತ್ತಮುತ್ತಲಿನ ಹಸಿರು ವಲಯ ಸಂಪೂರ್ಣವಾಗಿ ಕರಗಿಹೋಗುವ ಆತಂಕ ಮೂಡಿದೆ.
ಪರಿಸರ ಪ್ರೇಮಿಗಳ ಅಸಮಾಧಾನ
ಬೆಂಗಳೂರಿನ ಇಕ್ಕೆಲಗಳನ್ನು ಜೋಡಿಸಲಿರುವ ಈ ಮೆಟ್ರೋ ಫೇಸ್-3 ಯೋಜನೆಯು ಒಟ್ಟು 44.65 ಕಿಲೋಮೀಟರ್ ಉದ್ದದ ವ್ಯಾಪ್ತಿಯನ್ನು ಹೊಂದಿದೆ. ಇದು ಪ್ರಮುಖವಾಗಿ ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಜೆಪಿ ನಗರ 4ನೇ ಹಂತದಿಂದ ಕೆಂಪಾಪುರದವರೆಗಿನ ಹೊರವರ್ತುಲ ರಸ್ತೆ (ORR) ಮಾರ್ಗದಲ್ಲಿ 32.15 ಕಿ.ಮೀ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗಿನ ಮಾಗಡಿ ರಸ್ತೆ ಮಾರ್ಗದಲ್ಲಿ 12.50 ಕಿ.ಮೀ ಉದ್ದದ ಹಳಿ ನಿರ್ಮಾಣವಾಗಲಿದೆ. ವಾಹನ ಸವಾರರ ಅನುಕೂಲಕ್ಕಾಗಿ ಈ ಬಾರಿ ಡಬಲ್ ಡೆಕ್ಕರ್ ಫ್ಲೈ ಓವರ್ ಮಾದರಿಯನ್ನು ಸೇರಿಸಿರುವುದರಿಂದ, ಕೇಂದ್ರ ಸರ್ಕಾರದಿಂದ ಈ ಯೋಜನೆಗೆ ಶೀಘ್ರದಲ್ಲೇ ಅಂತಿಮ ಮಂಜೂರಾತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಅಭಿವೃದ್ಧಿಯ ನಾಗಾಲೋಟಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪತ್ತು ಬಲಿಯಾಗುತ್ತಿರುವುದು ಪರಿಸರ ವಾದಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೋರ್ಟ್‌ಗಳಿಗೆ ಸರಣಿ ಇ-ಮೇಲ್ ಬಾಂಬ್ ಬೆದರಿಕೆ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೈಡ್ರಾಮಾ
