ನವದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ಸುಖಾಂತ್ಯ ಕಾಣುತ್ತಿದ್ದಂತೆಯೇ, ಇತ್ತ ದೇಶದ ರಾಜಧಾನಿ ನವದೆಹಲಿಯಲ್ಲಿ ನೂತನ ಸಚಿವ ಸಂಪುಟ (Congress) ಸೇರ್ಪಡೆಗಾಗಿ ಭಾರಿ ಪೈಪೋಟಿ ಶುರುವಾಗಿದೆ. ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿ ತಲುಪಿದ್ದು, ಹೊಸ ಕ್ಯಾಬಿನೆಟ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ರಾಜಧಾನಿಯಲ್ಲಿ ಬೀಡುಬಿಟ್ಟು ಬಿರುಸಿನ ಸರ್ಕಸ್ ಆರಂಭಿಸಿದ್ದಾರೆ.
ಲಾಭಿ ಆರಂಭಿಸಿದ ಬಿಕೆ ಹರಿಪ್ರಸಾದ್
ಈ ಸಚಿವ ಸಂಪುಟ ರಚನೆಯ ಕಸರತ್ತಿನ ನಡುವೆ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರ ರಾಜಕೀಯ ನಡೆ ತೀವ್ರ ಕುತೂಹಲ ಕೆರಳಿಸಿದೆ. ದೆಹಲಿಯಲ್ಲಿ ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಖುದ್ದಾಗಿ ಭೇಟಿ ಮಾಡಿರುವ ಅವರು, ತಮಗೆ ಈ ಬಾರಿ ಸಚಿವ ಸ್ಥಾನ ನೀಡುವಂತೆ ಗಂಭೀರವಾಗಿ ಒತ್ತಡ ಹೇರಿದ್ದಾರೆ. ಇದರ ಜೊತೆಗೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದರಿಂದ ತೆರವಾಗಲಿರುವ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲೆಯೂ ಹರಿಪ್ರಸಾದ್ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ವರಿಷ್ಠರ ಜೊತೆಗಿನ ಮಾತುಕತೆಯ ವೇಳೆ ತಮಗೆ ಸಚಿವ ಸ್ಥಾನ ಅಥವಾ ಪಕ್ಷದ ಸಾರಥ್ಯ ವಹಿಸಲು ಬೆಂಬಲ ನೀಡಬೇಕು ಎಂದು ಡಿಕೆಶಿಯವರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಇನ್ನೊಂದೆಡೆ, ಮಂತ್ರಿಗಿರಿ ತಮಗೇ ಸಿಗಬೇಕೆಂದು ಪಟ್ಟು ಹಿಡಿದಿರುವ ರಾಜ್ಯದ ಸುಮಾರು 40ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಈಗಾಗಲೇ ದೆಹಲಿಗೆ ಧಾವಿಸಿದ್ದಾರೆ. ದೆಹಲಿಯ ಕರ್ನಾಟಕ ಭವನ, ಅದರ ಅನೆಕ್ಸ್ ಕಟ್ಟಡ ಹಾಗೂ ಪ್ರಮುಖ ಹೋಟೆಲ್ಗಳಲ್ಲಿ ವಾಸ್ತವ್ಯ ಹೂಡಿರುವ ಶಾಸಕರ ದಂಡು, ಹೈಕಮಾಂಡ್ ಮೇಲೆ ಒತ್ತಡ ತರಲು ಸಿದ್ಧತೆ ನಡೆಸಿದೆ. ಸದ್ಯಕ್ಕೆ ದೆಹಲಿಯಲ್ಲಿ ಎಐಸಿಸಿ ಪ್ರಮುಖ ನಾಯಕರು ಲಭ್ಯವಿಲ್ಲದ ಕಾರಣ ವರಿಷ್ಠರ ಬರುವಿಕೆಗಾಗಿ ಶಾಸಕರು ತೀವ್ರವಾಗಿ ಕಾಯುತ್ತಿದ್ದಾರೆ. ನಾಯಕರು ಸಿಗುತ್ತಿದ್ದಂತೆಯೇ ತಮ್ಮ ಆಪ್ತರು ಹಾಗೂ ಗಾಡ್ಫಾದರ್ಗಳ ಮೂಲಕ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಲು ಶಾಸಕರು ಸಜ್ಜಾಗಿದ್ದಾರೆ.
