ನವದೆಹಲಿ: ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ತಾನೇ ಎಡವಟ್ಟು ಮಾಡಿ, ಈಗ ಅದನ್ನು ಸರಿಪಡಿಸಲು ವಿದ್ಯಾರ್ಥಿಗಳಿಂದ ಭಾರಿ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿರುವ ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (CBSE) ಧೋರಣೆಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕಟುವಾಗಿ ಟೀಕಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಒಳಗೆ ‘ಜೇಬುಕಳ್ಳರು’ ಕುಳಿತಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆಕ್ರೋಶ ಹೊರಹಾಕಿರುವ ಅವರು, ಮಂಡಳಿಯು ಜ್ಞಾನದಾನದ ಸೇವೆಯನ್ನು ಬದಿಗಿಟ್ಟು ಶಿಕ್ಷಣವನ್ನು ಕೇವಲ ಒಂದು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಂಡಿದೆ ಎಂದು ಗಂಭೀರವಾಗಿ ದೂಷಿಸಿದ್ದಾರೆ.
2 ಸಾವಿರ ರೂಪಾಯಿ ಹೊರೆ
ಸಿಬಿಎಸ್‌ಇ ಮಾಡಿರುವ ತಪ್ಪಾದ ಮಾರ್ಕಿಂಗ್‌ನಿಂದಾಗಿ ಈಗಾಗಲೇ ಲಕ್ಷಾಂತರ ಮಕ್ಕಳು ಕಡಿಮೆ ಅಂಕಗಳನ್ನು ಪಡೆದು ಕಂಗಾಲಾಗಿದ್ದಾರೆ. ಆದರೆ, ಈ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಮಂಡಳಿಯು ವಿದ್ಯಾರ್ಥಿಗಳ ಜೇಬಿಗೆ ಕೈಹಾಕಿದೆ. ಮರುಪರಿಶೀಲನೆಗಾಗಿ ಡಿಜಿಟಲ್ ಸ್ಕ್ಯಾನ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 100 ರೂ., ಅಂಕಗಳ ಮರುಎಣಿಕೆಗೆ 100 ರೂ. ಹಾಗೂ ಪ್ರತಿ ಪ್ರಶ್ನೆಯ ಮರುಮೌಲ್ಯಮಾಪನಕ್ಕೆ 25 ರೂ. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಯೊಬ್ಬ ತನ್ನದೇ ಉತ್ತರ ಪತ್ರಿಕೆಯ ಸರಿಯಾದ ಅಂಕಗಳನ್ನು ಪಡೆಯಲು ಬರೋಬ್ಬರಿ 2,000 ರೂಪಾಯಿಗಳವರೆಗೆ ದೊಡ್ಡ ಮೊತ್ತದ ಹಣವನ್ನು ದಂಡದ ರೂಪದಲ್ಲಿ ಪಾವತಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
जेबकतरों से सावधान – आज वो CBSE के अंदर बैठे हैं। CBSE की गलती से नंबर ग़लत आए तो आपको क्या मिलता है?
— Rahul Gandhi (@RahulGandhi) June 1, 2026
एक bill:
Digital scan copy: ₹100/विषय
Re-totalling: ₹100/paper
Re-evaluation: ₹25/सवाल
अपनी ही answer sheet की सही जाँच के लिए एक बच्चे को ₹2000 तक भरने पड़ सकते हैं।… pic.twitter.com/H0WS1xF6Zf
ಮೊಬೈಲ್ ಫೋನ್‌ಗಳ ಮೂಲಕವೇ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸಿರುವುದರಿಂದ ಅಂಕ ನೀಡಿಕೆಯಲ್ಲಿ ತಪ್ಪುಗಳಾಗಿರುವುದು ಸ್ಪಷ್ಟವಾಗಿದೆ. ಇಂತಹ ಬೇಜವಾಬ್ದಾರಿತನದ ನಡುವೆಯೂ ದೇಶದ ಸುಮಾರು 4 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮರುಪರಿಶೀಲನೆಗೆ ಅರ್ಜಿ ಸಲ್ಲಿಸುವಂತೆ ಮಾಡಲಾಗಿದ್ದು, ಇದರ ಮೂಲಕ ಸಿಬಿಎಸ್‌ಇ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ರಂಗವನ್ನು ವ್ಯಾಪಾರೀಕರಣಗೊಳಿಸಿದಾಗ ತಪ್ಪುಗಳನ್ನು ತಿದ್ದುವ ಬದಲು ಹಣ ಮಾಡುವ ದಾರಿಯನ್ನಾಗಿ ಬಳಸಿಕೊಳ್ಳಲಾಗುತ್ತದೆ. ಈ ವ್ಯವಸ್ಥೆಯಲ್ಲಿ ತಪ್ಪು ಮಂಡಳಿಯದ್ದಾದರೂ, ಶಿಕ್ಷೆ ಮಾತ್ರ ಮಕ್ಕಳಿಗೆ ಸಿಗುತ್ತಿದೆ ಮತ್ತು ಆದಾಯ ಸರ್ಕಾರಕ್ಕೆ ಹೋಗುತ್ತಿದೆ. ಈ ವಾಣಿಜ್ಯ ಆಟದಿಂದಾಗಿ ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯ, ಧೈರ್ಯ ಹಾಗೂ ಉಜ್ವಲ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ಲಾಸ್ಟಿಕ್ ಕರೆನ್ಸಿ ತರಲು ಆರ್‌ಬಿಐ ಗಂಭೀರ ಚಿಂತನೆ: 700 ರೂಪಾಯಿ ನೋಟಿನ ಸುದ್ದಿ ಸಂಪೂರ್ಣ ನಕಲಿ
