ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿದ್ದು, ರಾಜ್ಯದಲ್ಲಿ ರಾಜಕೀಯ ಕಾವು ಏರಿದೆ. ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಟ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಭರ್ಜರಿ ಜಯದ ನಿರೀಕ್ಷೆಯಲ್ಲಿದ್ದು, ವಿಜಯ್ ಅವರು ತಮ್ಮ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ವಿಜಯ್ ಹೇಳಿದ್ದೇನು?
ಚೆನ್ನೈನ ಪಣೈಯೂರ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ 233 ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ ವಿಜಯ್, ಮತ ಎಣಿಕೆಯ ದಿನದಂದು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. “ಈ ಬಾರಿ ನಾವು ದೊಡ್ಡ ಅಂತರದಿಂದ ಗೆಲ್ಲುವುದು ಖಚಿತ. ಆದರೆ ಮತ ಎಣಿಕೆಯ ವೇಳೆ ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಫಾರ್ಮ್ 17C ಅನ್ನು ಮರೆಯದೆ ತನ್ನಿ. ಯಾವುದೇ ಹಂತದಲ್ಲೂ ಶಿಸ್ತು ಮತ್ತು ಒಗ್ಗಟ್ಟು ಮರೆಯಬೇಡಿ” ಎಂದು ಅಭ್ಯರ್ಥಿಗಳಲ್ಲಿ ಧೈರ್ಯ ತುಂಬಿದರು. ಇದೇ ವೇಳೆ, ಇತರ ಪಕ್ಷಗಳು ಆಮಿಷ ಒಡ್ಡಿ ಸೆಳೆಯಲು ಪ್ರಯತ್ನಿಸಿದರೆ ಅತ್ತ ಗಮನ ನೀಡಬೇಡಿ ಎಂದು ಎಚ್ಚರಿಸುವ ಮೂಲಕ ಸಂಭಾವ್ಯ ‘ಆಪರೇಷನ್’ ತಂತ್ರಗಳಿಗೆ ಬ್ರೇಕ್ ಹಾಕಿದ್ದಾರೆ.
ಈ ಬಾರಿ ತಮಿಳುನಾಡಿನಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ವಿದೇಶಿ ಕನ್ನಡಿಗರಂತೆ ವಿದೇಶಿ ತಮಿಳರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದ್ದಾರೆ. ಏಪ್ರಿಲ್ 23ರಂದು ನಡೆದ ಮತದಾನದ ಫಲಿತಾಂಶವು ಮೇ 4ರಂದು ಹೊರಬೀಳಲಿದೆ. ಈಗಾಗಲೇ ಪ್ರಕಟವಾಗಿರುವ ಎಕ್ಸಿಟ್ ಪೋಲ್‌ಗಳು ವಿಜಯ್ ಪಾಲಿಗೆ ಶುಭಸುದ್ದಿ ನೀಡಿವೆ.
ವಿಶೇಷವಾಗಿ ‘ಆಕ್ಸಿಸ್ ಮೈ ಇಂಡಿಯಾ’ ಸಮೀಕ್ಷೆಯು ಟಿವಿಕೆ ಪಕ್ಷಕ್ಕೆ 98ರಿಂದ 120 ಸ್ಥಾನಗಳನ್ನು ನೀಡಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದೆ. ಆಡಳಿತಾರೂಢ ಡಿಎಂಕೆ 92-110 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ. ಈ ಹಿಂದಿನ ಅನೇಕ ಸಮೀಕ್ಷೆಗಳು ನಿಜವಾಗಿರುವ ಇತಿಹಾಸವಿರುವುದರಿಂದ, ದಳಪತಿ ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆಯೇ ಎಂಬ ಕುತೂಹಲ ಇಡೀ ದೇಶದಾದ್ಯಂತ ಮನೆಮಾಡಿದೆ. ಮೇ 4ರಂದು ತಮಿಳುನಾಡಿನ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
