ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ದಾಖಲಿಸಿರುವ ದೂರಿನ ಹಿನ್ನೆಲೆಯಲ್ಲಿ, ಕಾಂಗ್ರೆಸ್ ನಾಯಕ ಪವನ್ ಖೇರಾ (Pawan Khera) ಸಲ್ಲಿಸಿರುವ ಮುಂಜಾಗ್ರತೆ ಜಾಮೀನು ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಗುರುವಾರ ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಚಂದೂರ್ಕರ್ ಅವರನ್ನೊಳಗೊಂಡ ಪೀಠವು ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿತು.
ಬಂಧಿಸಿ ಅವಮಾನ ಮಾಡಬೇಡಿ ಎಂದ ಖೇರಾ
ಖೇರಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, “ಇದು ಒಂದು ಅಭೂತಪೂರ್ವ ಪ್ರಕರಣ. ಅಸ್ಸಾಂ ಮುಖ್ಯಮಂತ್ರಿಯವರು ಪವನ್ ಖೇರಾ ಉಳಿದ ಜೀವನವನ್ನು ಜೈಲಿನಲ್ಲೇ ಕಳೆಯಬೇಕಾಗುತ್ತದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಒಬ್ಬ ಸಾಂವಿಧಾನಿಕ ಹುದ್ದೆಯಲ್ಲಿರುವವರು ಈ ರೀತಿ ವರ್ತಿಸುತ್ತಾರೆ ಎಂದು ಅಂಬೇಡ್ಕರ್ ಅವರು ಊಹಿಸಿರಲಿಕ್ಕಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಇದು ಕೇವಲ ಮಾನಹಾನಿ ಮತ್ತು ರಾಜಕೀಯ ಆರೋಪಗಳಿಗೆ ಸಂಬಂಧಿಸಿದ ವಿಷಯವಾಗಿದ್ದು, ಖೇರಾ ಅವರ ಬಂಧನ ಅಥವಾ ಕಸ್ಟಡಿ ವಿಚಾರಣೆಯ ಅಗತ್ಯವಿಲ್ಲ. ಸುಮಾರು 50-60 ಅಸ್ಸಾಂ ಪೊಲೀಸರು ಅವರನ್ನು ಬಂಧಿಸಲು ದೆಹಲಿಗೆ ಬಂದಿರುವುದು ಅವರು ಒಬ್ಬ ಭಯೋತ್ಪಾದಕ ಎಂಬಂತೆ ಬಿಂಬಿಸುತ್ತಿದೆ ಎಂದು ಸಿಂಘ್ವಿ ವಾದಿಸಿದರು.
ಖೇರಾ ಹಿಂದೆ ವಿದೇಶಿ ಕೈವಾಡ?
ಆದರೆ, ಅಸ್ಸಾಂ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜಾಮೀನು ಅರ್ಜಿಯನ್ನು ಬಲವಾಗಿ ವಿರೋಧಿಸಿದರು. “ಪವನ್ ಖೇರಾ ಅವರು ಮುಖ್ಯಮಂತ್ರಿಗಳ ಪತ್ನಿ ಮೂರು ದೇಶಗಳ ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ನಕಲಿ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ. ತನಿಖೆಯ ಪ್ರಕಾರ ಆ ದಾಖಲೆಗಳನ್ನು ನಕಲು ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಈ ದಾಖಲೆಗಳನ್ನು ಯಾರು ಸೃಷ್ಟಿಸಿದರು? ಇದರ ಹಿಂದೆ ವಿದೇಶಿ ಕೈವಾಡವಿದೆಯೇ? ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಯಾರು ಇವರಿಗೆ ಈ ದಾಖಲೆ ನೀಡಿದರು? ಎಂಬುದನ್ನು ಪತ್ತೆ ಹಚ್ಚಲು ಖೇರಾ ಅವರ ಕಸ್ಟಡಿ ವಿಚಾರಣೆ ಅತಿ ಅಗತ್ಯ” ಎಂದು ಮೆಹ್ತಾ ಪ್ರತಿಪಾದಿಸಿದರು. ಖೇರಾ ಅವರು ಎಫ್‌ಐಆರ್ ದಾಖಲಾದ ದಿನದಿಂದ ತಲೆಮರೆಸಿಕೊಂಡಿದ್ದಾರೆ ಎಂದು ಸಹ ಅವರು ತಿಳಿಸಿದರು.
ಗೌಹಟಿ ಹೈಕೋರ್ಟ್ ಈ ಹಿಂದೆ ಖೇರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. “ಇದು ಕೇವಲ ಮಾನಹಾನಿ ಪ್ರಕರಣವಲ್ಲ, ನಕಲಿ ದಾಖಲೆಗಳ ಮೂಲವನ್ನು ಪತ್ತೆ ಹಚ್ಚಲು ಆರೋಪಿಯ ಕಸ್ಟಡಿ ಅಗತ್ಯವಿದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಇದನ್ನು ಪ್ರಶ್ನಿಸಿ ಖೇರಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಉಭಯ ಪಕ್ಷಗಳ ವಾದವನ್ನು ಆಲಿಸಿರುವ ಸುಪ್ರೀಂ ಕೋರ್ಟ್, ಶೀಘ್ರದಲ್ಲೇ ತನ್ನ ಅಂತಿಮ ತೀರ್ಪು ಪ್ರಕಟಿಸಲಿದೆ. ಅಸ್ಸಾಂ ಮುಖ್ಯಮಂತ್ರಿ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಖೇರಾ ವಿರುದ್ಧ ವಂಚನೆ, ನಕಲಿ ದಾಖಲೆ ಸೃಷ್ಟಿ ಮತ್ತು ಮಾನಹಾನಿ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
