ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ (ಮಧ್ಯಪ್ರಾಚ್ಯ) ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ ಆಮದಿನಲ್ಲಿ ವ್ಯತ್ಯಯ ಉಂಟಾಗಿದ್ದು, ರಾಜ್ಯದ ಹೋಟೆಲ್(Hotel) ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.
ಹೋಟೆಲ್‌ಗಳಿಗೆ ಗ್ಯಾಸ್ ಪೂರೈಕೆ ಕಷ್ಟ
ಈ ನಡುವೆ, ಸ್ಟಾಕ್ ಇಲ್ಲದ ಕಾರಣ ಹೋಟೆಲ್‌ಗಳಿಗೆ ಸದ್ಯಕ್ಕೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವುದು ಕಷ್ಟಕರ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ತೈಲ ಪೂರೈಕೆ ಕಂಪನಿಗಳ (OMCs) ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೃಹ ಬಳಕೆಯ (Domestic) ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಆದರೆ, ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಇರುವುದರಿಂದ ಸದ್ಯಕ್ಕೆ ಆಸ್ಪತ್ರೆಗಳು, ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳಿಗೆ ಮಾತ್ರ ಆದ್ಯತೆಯ ಮೇಲೆ ಪೂರೈಕೆ ಮಾಡಲಾಗುವುದು” ಎಂದು ತಿಳಿಸಿದರು.
ಸರ್ಕಾರದಿಂದ ಅಗತ್ಯ ಕ್ರಮ
ಈಗಾಗಲೇ ಹೋಟೆಲ್ ಮಾಲೀಕರ ಸಂಘದ ಜೊತೆ ಸಭೆ ನಡೆಸಲಾಗಿದ್ದು, ಮುಂದಿನ 7 ರಿಂದ 10 ದಿನಗಳವರೆಗೆ ಸಿಲಿಂಡರ್‌ಗೆ ಪರ್ಯಾಯವಾಗಿ ವಿದ್ಯುತ್ ಸ್ಟೌವ್‌ಗಳಂತಹ ವ್ಯವಸ್ಥೆ ಮಾಡಿಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ. ಹೋಟೆಲ್ ಉದ್ಯಮವನ್ನು ರಕ್ಷಿಸಲು ಸರ್ಕಾರ ಶ್ರಮಿಸುತ್ತಿದ್ದು, ಮುಂದಿನ ವಾರದ ವೇಳೆಗೆ ಪೂರೈಕೆ ಸುಗಮವಾಗುವ ಸಾಧ್ಯತೆಯಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಇದೇ ವೇಳೆ, ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆಯ ಸಿಲಿಂಡರ್‌ಗಳನ್ನು ಅಕ್ರಮವಾಗಿ ಬಳಸುವುದನ್ನು ತಡೆಯಲು ಆಹಾರ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ ಒಟ್ಟು 256 ಕಡೆಗಳಲ್ಲಿ ದಾಳಿ ನಡೆಸಿ, ನೂರಾರು ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
