ನವದೆಹಲಿ: ಪಶ್ಚಿಮ ಏಷ್ಯಾ (War) ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎದುರಾಗಿರುವ ಪರಿಸ್ಥಿತಿಯ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ದೆಹಲಿಯಲ್ಲಿಂದು ಹಿರಿಯ ಸಚಿವರ ಗುಂಪಿನ ಸಭೆ ನಡೆಯಿತು.
ಕೇಂದ್ರದಿಂದ ಸಕಲ ಕ್ರಮ
ಸಭೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್, ಪ್ರಲ್ಹಾದ್ ಜೋಶಿ , ಕಿರಣ್ ರಿಜಿಜು, ಹರ್ ದೀಪ್ ಸಿಂಗ್ ಪುರಿ, ಕೆ. ರಾಮ್ ಮೋಹನ್ ನಾಯ್ಡು, ಜಿತೇಂದ್ರ ಸಿಂಗ್, ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಕ್ರಂ ಮಿಸ್ರಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.ಸಭೆಯಲ್ಲಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಈಗಾಗಲೇ ಕೇಂದ್ರ ಸರ್ಕಾರ ಹಲವು ಸಭೆಗಳನ್ನು ನಡೆಸಿದ್ದು, ದೇಶದಲ್ಲಿ ಇಂಧನ ಕೊರತೆ ಇಲ್ಲ ಎಂಬುದನ್ನು ಜನರಿಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟಿದೆ. ಈ ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ. ಪರಿಸ್ಥಿತಿ ಕುರಿತು ಮಾಹಿತಿ ನೀಡುತ್ತಿದ್ದು, ವಿದೇಶಗಳಲ್ಲಿರುವ ಭಾರತೀಯರಿಗೂ ಅಗತ್ಯ ಸಲಹೆ- ಸೂಚನೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ.
ಎಲ್ಪಿಜಿ ಸಮಸ್ಯೆ ಇಲ್ಲ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದಲ್ಲಿ ಎಲ್ ಪಿಜಿ ಸಕಾಲದಲ್ಲಿ ದೊರೆಯುವಂತೆ ಅಗತ್ಯ ಕ್ರಮ ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಸ್ಥಿತಿ ಎದುರಿಸಲು ಕೇಂದ್ರದೊಂದಿಗೆ ಸಹಕಾರ ನೀಡುವಂತೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
