Shalini Rajneesh: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಸ ಪಾರ್ಕಿಂಗ್‌ ವ್ಯವಸ್ಥೆ, ಅಧಿಕಾರಿಗಳಿಗೆ ಶಾಲಿನಿ ರಜನೀಶ್‌ ಖಡಕ್‌ ಸೂಚನೆ

Shalini Rajneesh visit to international airport bengaluru

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajneesh) ಭೇಟಿ ನೀಡಿದ್ದು, ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದಾರೆ.

ಹೊಸ ಪಾರ್ಕಿಂಗ್‌ ವ್ಯವಸ್ಥೆ ಪರಿಶೀಲನೆ
ವಿಮಾನ ನಿಲ್ದಾಣದಲ್ಲಿ ಜಾರಿಗೆ ತರಲಾದ ಹೊಸ ಪಾರ್ಕಿಂಗ್ ಮತ್ತು ನೋಂದಣಿ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಇಂದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಟರ್ಮಿನಲ್-1ರ ಆಗಮನ ದ್ವಾರದ ಬಳಿ ವಾಹನಗಳ ಅಸ್ತವ್ಯಸ್ತ ಸಂಚಾರ ಹಾಗೂ ದಟ್ಟಣೆಯಿಂದ ಪ್ರಯಾಣಿಕರಿಂದ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಭೆ ಮಾಡಲಾಗಿದ್ದು, ಖಾಸಗಿ ಮತ್ತು ವಾಣಿಜ್ಯ ವಾಹನಗಳ ಪ್ರವೇಶವನ್ನು ವ್ಯವಸ್ಥಿತವಾಗಿ ನಿಯಂತ್ರಿಸಬೇಕು. ಆಗಮನ ದ್ವಾರದ ಸಮೀಪದ ನೂರು ಮೀಟರ್ ವ್ಯಾಪ್ತಿಯನ್ನು ’ಹಾರ್ನ್ ಮುಕ್ತ ವಲಯ’ ಎಂದು ಘೋಷಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಪಿ-4 ಪಾರ್ಕಿಂಗ್‌ನಲ್ಲಿ ವಾಹನ ನಿಲುಗಡೆ ಮಾಡುವ ಖಾಸಗಿ ಮಾಲೀಕರಿಗೆ ’ವಾಲೆಟ್’ ಸೌಲಭ್ಯ ಒದಗಿಸಬೇಕು. ಹಿರಿಯ ನಾಗರಿಕರಿಗಾಗಿ ಹೈಡ್ರಾಲಿಕ್ ಸೌಲಭ್ಯವುಳ್ಳ ವಿಶೇಷ ವಾಹನಗಳು ಹಾಗೂ ಟರ್ಮಿನಲ್‌ಗಳ ನಡುವೆ ಉಚಿತ ಶಟಲ್ ಬಸ್ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸೂಚನೆ ನೀಡಲಾಗಿದೆ.

ಅಧಿಕಾರಿಗಳಿಗೆ ಖಡಕ್‌ ಸೂಚನೆ

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕಡ್ಡಾಯ ಪೊಲೀಸ್ ಪರಿಶೀಲನೆ, ಎ.ಐ.ಎಸ್-140 ತಾಂತ್ರಿಕತೆ ಹಾಗೂ ಪ್ಯಾನಿಕ್ ಬಟನ್ ಹೊಂದಿರುವ ಟ್ಯಾಕ್ಸಿಗಳಿಗೆ ಮಾತ್ರ ಕೆ.ಎಸ್.ಟಿ.ಡಿ.ಸಿ ಮೂಲಕ ನೋಂದಣಿ ಮಾಡಿಕೊಂಡು ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಪ್ರಯಾಣಿಕರಿಗೆ ಮಾರ್ಗದರ್ಶನ ನೀಡಲು ಸಂಚಾರ ಡೆಸ್ಕ್ ಸ್ಥಾಪಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಮ್ಮ ಯಾತ್ರಿ ಮತ್ತು ರ್‍ಯಾಪಿಡೋ ಸೇವೆಗಳನ್ನು ಪಿ-1 ಮತ್ತು ಪಿ-2 ಬದಲಿಗೆ ಪಿ-4 ಪಾರ್ಕಿಂಗ್‌ಗೆ ಸ್ಥಳಾಂತರಿಸಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಿಮಾನ ನಿಲ್ದಾಣದ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ, ಗೃಹ ಸಚಿವರು ಹೇಳಿದ್ದೇನು?

Leave a Reply

Your email address will not be published. Required fields are marked *