ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Sandalwood) ಅಭಿನಯದ ಸಿನಿಮಾವೊಂದು ಬರೋಬ್ಬರಿ 19 ವರ್ಷಗಳ ನಂತರ ತೆರೆಯ ಮೇಲೆ ಬರುತ್ತಿದ್ದು, ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
ರಕ್ತ ಕಾಶ್ಮೀರ ಸಿನಿಮಾ ರಿಲೀಸ್‌ಗೆ ಸಜ್ಜು
ಹೌದು, ಸುಮಾರು 19 ವರ್ಷಗಳ ಹಿಂದೆ ರಮ್ಯಾ ಹಾಗೂ ಉಪೇಂದ್ರ ಅಭಿನಯದ ರಕ್ತ ಕಾಶ್ಮೀರ ಎನ್ನುವ ಸಿನಿಮಾ ಸೆಟ್ಟೇರಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾವನ್ನ ರಿಲೀಸ್ ಮಾಡಲು ಆಗಿರಲಿಲ್ಲ. ಈ ಸಿನಿಮಾವನ್ನ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದರು ಹಾಗೂ ಈ ಸಿನಿಮಾವನ್ನು ಎಂಡಿಎಂ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿತ್ತು. ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಅದನ್ನ ರಿಲೀಸ್ ಮಾಡುವ ವಿಚಾರವಾಗಿ ಅನೇಕ ಸುದ್ದಿಗಳು ಹರಿದಾಡಿದ್ದವು. ಇದೀಗ ಕೊನೆಗೂ ಆ ಸಿನಿಮಾ ರಿಲೀಸ್ ಆಗುತ್ತಿದ್ದು, ಅದರ ದಿನಾಂಕವನ್ನ ನಿಗದಿ ಮಾಡಲಾಗಿದೆ.
ಈ ಸಿನಿಮಾವು 2007ರಲ್ಲಿ ಆರಂಭ ಆಗಿತ್ತು. ಆಗಿನ ಕಾಲದಲ್ಲಿ ಬಿಗ್ ಬಜೆಟ್ ಸಿನಿಮಾ ಎನ್ನುವ ಖ್ಯಾತಿಯನ್ನ ಸಹ ಗಳಿಸಿತ್ತು. ಈ ಚಿತ್ರವನ್ನ ಬರೋಬ್ಬರಿ 6 ಕೋಟಿ ಖರ್ಚು ಮಾಡಿ ನಿರ್ಮಾಣ ಮಾಡ್ತಿದ್ದಾರೆ ಎಂಬೆಲ್ಲಾ ಸುದ್ದಿಗಳೂ ಸಹ ಇದ್ದವು, ಆದರೆ ಸಿನಿಮಾ ಮಾತ್ರ ಬಿಡುಗಡೆ ಆಗಲಿಲ್ಲ. ಈಗ ಅದಕ್ಕೆ ರಿಲೀಸ್ ಭಾಗ್ಯ ಸಿಗುತ್ತಿದೆ.
ಜನವರಿ 30ಕ್ಕೆ ಸಿನಿಮಾ ರಿಲೀಸ್
ಸಿನಿಮಾ ತಂಡ ನೀಡಿರುವ ಮಾಹಿತಿ ಪ್ರಕಾರ ಈ ಸಿನಿಮಾ ಇದೇ ಜನವರಿ 30ಕ್ಕೆ ತೆರೆಗೆ ಬರಲಿದೆ. ಬಹಳ ವಿಶೇಷವಾದ ಸಿನಿಮಾ ಇದಾಗಿದ್ದು, ಇದರಲ್ಲಿ ಕನ್ನಡದ 14 ಜನ ನಾಯಕರು ಇರುವ ಹಾಡೊಂದು ಇದೆ. ಹೌದು, ಈ ಸಿನಿಮಾದಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ, ರಾಕ್ ಲೈನ್ ವೆಂಕಟೇಶ್ ಹೀಗೆ 14 ಜನ ಚಿತ್ರದ ಈ ಒಂದು ಹಾಡಿನಲ್ಲಿ ನಟಿಸಿದ್ದಾರೆ. ಅಲ್ಲದೇ, ಈ ಸಿನಿಮಾಗೆ ಆಗಿನ ಕಾಲದಲ್ಲಿ ಗ್ರಾಫಿಕ್ಸ್ ಬಳಕೆ ಮಾಡಲಾಗಿತ್ತು.
