ಬೆಂಗಳೂರು: ಇಂದು ದೇಶದಾದ್ಯಂತ 77ನೇ ಗಣರಾಜ್ಯೋತ್ಸವವನ್ನ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಈ ಗಣರಾಜ್ಯೋತ್ಸವದ (Republic Day) ಅಂಗವಾಗಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ (Thavarchand Gehlot) ಅವರು ರಾಷ್ಟ್ರ ಧ್ವಜಹಾರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿ
ಇನ್ನು ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸಹ ಭಾಗಿ ಆಗಿದ್ದು, ಸಿದ್ದರಾಮಯ್ಯ ಅವರು ಗವರ್ನರ್ ಗೆಹ್ಲೋಟ್ ಅವರಿಗೆ ಕೈಮುಗಿದು ಸ್ವಾಗತ ಮಾಡಿದ್ದಾರೆ. ಇನ್ನು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ತೆರೆದ ಜೀಪ್ನಲ್ಲಿ ಪರೇಡ್ ವೀಕ್ಷಣೆ ಮಾಡಿದ್ದು, ನಂತರ ಗೌರವ ರಕ್ಷೆ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕೆಲ ಸಚಿವರು, ವಿಧಾನಸಭಾ ಅಧ್ಯಕ್ಷರು, ವಿಧಾನ ಪರಿಷತ್ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ಕಠಿಣ ಭಾಷಣ ಕೈ ಬಿಟ್ಟ ರಾಜ್ಯ ಸರ್ಕಾರ
ಇನ್ನು ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವಿಚಾರವಾಗಿ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ರಾಜ್ಯಪಾಲರ ಗಣರಾಜ್ಯೋತ್ಸದ ಭಾಷಣದಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕಠಿಣ ಭಾಷಣವನ್ನ ಕೈಬಿಟ್ಟಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯದ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಮಾತನಾಡಿದ್ದು, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಸಹ ಹೇಳಲಾಗಿದೆ.
ಇದನ್ನೂ ಓದಿ: 77ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಭಾರತ, ದೇಶದ ಜನರಿಗೆ ಮೋದಿ ಶುಭಾಶಯ
