ನವದೆಹಲಿ: ಲಕ್ಷದ್ವೀಪ್ ನ ಕವರತ್ತಿಯಲ್ಲಿ ಮಲ್ಟಿ ಸ್ಪೆಷಲಾಟಿ ಜಂಟಿ ಸೇವೆಗಳ ವೈದ್ಯಕೀಯ ಶಿಬಿರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಉದ್ಘಾಟಿಸಿದ್ದಾರೆ.
ಗುಣಮಟ್ಟದ ಆರೋಗ್ಯ ಸೇವೆ ಭರವಸೆ
ಭಾರತೀಯ ನೌಕಾಪಡೆ ಈ ಬೃಹತ್ ವೈದ್ಯಕೀಯ ಶಿಬಿರವನ್ನು ಆಯೋಜಿಸಿದ್ದು, ಇದರಲ್ಲಿ ದೂರದ ಗುಡ್ಡಗಾಡು ಪ್ರದೇಶಗಳ ಜನರ ಬಳಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಬದ್ಧತೆಯ ಸಂಕೇತವಾಗಿದ್ದು, ಆ ಮೂಲಕ ಸ್ವಾಸ್ಥ್ಯ ಭಾರತ ದೂರದೃಷ್ಟಿ ಸಾಕಾರದ ಗುರಿ ಹೊಂದಲಾಗಿದೆ.
ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದೇಶದ ದ್ವೀಪಗಳು ಹಾಗೂ ಗುಡ್ಡಗಾಡು ಪ್ರದೇಶಗಳ ಜನರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದ್ದು, ಜನರ ಆರೋಗ್ಯ ಸ್ವಾಸ್ಥ್ಯ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದರು.
ಈ ಶಿಬಿರದ ಮೂಲಕ ಹಿರಿಯ ನಾಗರಿಕರು ಸೇರಿದಂತೆ ಎಲ್ಲಾ ವರ್ಗದ ಜನರ ಮನೆ ಬಾಗಿಲಿಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು. ರಾಷ್ಟ್ರ ನಿರ್ಮಾಣ ಹಾಗೂ ಮನುಕುಲಕ್ಕೆ ನೆರವು ನೀಡುವ ಸೇನಾಪಡೆಗಳ ಬದ್ಧತೆಯ ಸಂಕೇತವಾಗಿದ್ದು, ಇಂತಹ ಕ್ರಮಗಳ ಮೂಲಕ ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
