ಬೆಂಗಳೂರು: ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರ- ಇವಿಎಂ ಬದಲು ಮತಪತ್ರಕ್ಕೆ ಮಣೆಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಆಧುನಿಕತೆ, ತಂತ್ರಜ್ಞಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ (Pralhad Joshi) ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಜೋಷಿ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಹ ಮತಪತ್ರ ಬಳಕೆಗೆ ನಿರ್ಧರಿಸಿರುವುದು ಪ್ರಗತಿಯ ವಿರುದ್ಧದ ನಿಲುವಾಗಿದೆ ಎಂದು ತಿಳಿಸಿದ್ದಾರೆ.
ಇಡೀ ದೇಶವೇ ಆಧುನೀಕ ತಂತ್ರಜ್ಞಾನ ಮತ್ತು ಪ್ರಗತಿಯತ್ತ ಸಾಗುತ್ತಿದೆ. ಆದರೆ ರಾಜ್ಯ ಸರ್ಕಾರ ಚುನಾವಣೆಯಲ್ಲಿ ಮತಪತ್ರ ಬಳಕೆಯ ಮೂಲಕ ಆಧುನಿಕತೆಯ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶಾದ್ಯಂತ ಇವಿಎಂ ಪರಿಚಯದ ಬಳಿಕ ಚುನಾವಣಾ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ. ಆದಾಗ್ಯೂ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಹೈಕಮಾಂಡನ್ನು ಮೆಚ್ಚಿಸಲು ಈ ರೀತಿ ವಿರೋಧ ನಡೆ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.
