ಕೇರಳ: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಇಂದು ಕೇರಳದ ತಿರುವನಂತಪುರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಅಮೃತ್ ಭಾರತ್ ರೈಲುಗಳ ಆರಂಭ
ಈ ಸಮಯದಲ್ಲಿ ಪ್ರಧಾನಿ ಮೋದಿ ಅವರು, ತಿರುವನಂತಪುರದಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಅಂಚೆ ಇಲಾಖೆಯ ವಿವಿಧ ಯೋಜನೆಗಳಿಗೆ ಅಡಿಗಲ್ಲು ಹಾಕುವುದರ ಜೊತೆಗೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಈ ವೇಳೆ ಪ್ರಧಾನಿ, ಮೂರು ಹೊಸ ಅಮೃತ್ ಭಾರತ್ ರೈಲುಗಳು, ನಾಗರ್ಕೋಯಿಲ್-ಮಂಗಳೂರು, ತಿರುವನಂತಪುರಂ-ತಾಂಬರಂ, ತಿರುವನಂತಪುರಂ-ಚಾರ್ಲಪಲ್ಲಿ ಮತ್ತು ತ್ರಿಶೂರ್ ಮತ್ತು ಗುರುವಾಯೂರ್ ನಡುವೆ ಹೊಸ ಪ್ಯಾಸೆಂಜರ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೇರಳದ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ 1 ಲಕ್ಷ ಫಲಾನುಭವಿಗಳಿಗೆ ಪಿಎಂ ಸ್ವನಿಧಿ ಸಾಲವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕೇರಳ ರಾಜ್ಯಪಾಲರಾದ ರಾಜೇಂದ್ರ ಅರಳೇಕರ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ , ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೇರಳ ಅಭಿವೃದ್ಧಿ ಪಥದತ್ತ ಸಾಗುತ್ತಿದೆ
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕೇರಳದ ವಿಕಾಸಕ್ಕಾಗಿ ಕೇಂದ್ರ ಸರ್ಕಾರದ ನೆರವಿನಿಂದ ಹೊಸ ದಿಶೆ ಆರಂಭವಾಗಿದೆ. ತಿರುವನಂತಪುರವನ್ನು ಅತಿದೊಡ್ಡ ನವೋದ್ಯಮ ಕೇಂದ್ರವನ್ನಾಗಿಸಲು ಪಣ ತೊಡಲಾಗಿದೆ. ಕಳೆದ 11 ವರ್ಷಗಳಲ್ಲಿ, ಕೇಂದ್ರ ಸರ್ಕಾರ, ನಗರ ಮೂಲಸೌಕರ್ಯದಲ್ಲಿ ಗಣನೀಯ ಹೂಡಿಕೆ ಮಾಡುತ್ತಿದೆ ಎಂದರು.
ಕೇಂದ್ರದ ಪ್ರಯತ್ನಗಳಿಂದ ಕೇರಳ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಹೊಸ ಚೈತನ್ಯವನ್ನು ಪಡೆದಿವೆ. ಇಂದಿನಿಂದ, ಕೇರಳದ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗಿದೆ. ಕಳೆದ 1 ದಶಕದಲ್ಲಿ ಕೋಟ್ಯಾಂತರ ನಾಗರೀಕರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ತರಲಾಗಿದೆ. ಇಂದು, ಬಡವರು, ದಲಿತರು, ಒಬಿಸಿ ಸಮುದಾಯ, ಮಹಿಳೆಯರು ಮತ್ತು ಮೀನುಗಾರರು ಬ್ಯಾಂಕ್ ಸಾಲಗಳನ್ನು ಹೆಚ್ಚು ಸುಲಭವಾಗಿ ಪಡೆಯಲು ಸಮರ್ಥರಾಗಿದ್ದಾರೆ ಎಂದರು.
ಕೇರಳದಲ್ಲಿ, -ಸಿಎಸ್ಐಆರ್ (CSIR) ಇನ್ನೋವೇಶನ್ ಹಬ್ ಉದ್ಘಾಟನೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ರೇಡಿಯೋ ಸರ್ಜರಿ ಕೇಂದ್ರದ ಉದ್ಘಾಟನೆಯು ರಾಜ್ಯವನ್ನು ವಿಜ್ಞಾನ, ನಾವೀನ್ಯತೆ ಮತ್ತು ಆರೋಗ್ಯ ರಕ್ಷಣೆಯ ಕೇಂದ್ರವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದರು. ಕೇರಳದಿಂದ, ದೇಶಾದ್ಯಂತ ಬಡವರ ಕಲ್ಯಾಣಕ್ಕಾಗಿ ಒಂದು ಉಪಕ್ರಮವನ್ನು ಪ್ರಾರಂಭಿಸಲಾಗಿದೆ.ನಗರದ ಜೀವನೋಪಾಯವನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಪ್ರಧಾನಿ ಅವರು ಪಿಎಂ ಸ್ವನಿಧಿ ಕ್ರೆಡಿಟ್ ಕಾರ್ಡ್ ಗೆ ಚಾಲನೆ ನೀಡಿದ್ದು, ಇದು ದೇಶಾದ್ಯಂತ ಬೀದಿಬದಿ ವ್ಯಾಪಾರಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ನಗರ ಪ್ರದೇಶದ ಬಡ ಕುಟುಂಬಗಳಿಗೂ ಸಾಕಷ್ಟು ಕೆಲಸ ಮಾಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ದೇಶದಲ್ಲಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿ ಬಡವರಿಗೆ ನೀಡಲಾಗಿದೆ. ಇವುಗಳಲ್ಲಿ, 1 ಕೋಟಿಗೂ ಹೆಚ್ಚು ಮನೆಗಳನ್ನು ನಗರ ಪ್ರದೇಶದ ಬಡವರಿಗೆ ನಿರ್ಮಿಸಲಾಗಿದೆ. ಕೇರಳದ ಸುಮಾರು 1.25 ಲಕ್ಷ ಬಡವರು ತಮ್ಮ ಮನೆಗಳನ್ನು ಪಡೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: 27 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಗಗನಯಾತ್ರಿ ಸುನೀತಾ ವಿಲಿಯಮ್ಸ್
