ಮೈಸೂರು: ಇಲ್ಲಿನ ಅಪೋಲೊ (Mysuru) ಬಿಜಿಎಸ್ ಆಸ್ಪತ್ರೆಯ ಸಹಯೋಗದೊಂದಿಗೆ ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನಿಂದ ಸೌಲಭ್ಯ ವಂಚಿತರ ಮಕ್ಕಳಿಗೆ 19 ಕ್ಲಬ್‌ಫೂಟ್ (ಪಾದದ ವಿರೂಪ) ನಿವಾರಣಾ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
20 ಸರ್ಜರಿ ಮಾಡುವ ಗುರಿ
ಇನ್ನು ಈ ಸಂಭ್ರಮವನ್ನು ಹಂಚಿಕೊಳ್ಳಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿದ್ದು, ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್ ಮತ್ತು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ (ಸಿಎಸ್‌ಆರ್) ಬದ್ಧತೆಗೆ ಅನುಗುಣವಾಗಿ 20 ಸರ್ಜರಿಗಳನ್ನು ಕೈಗಳ್ಳುವ ಗುರಿ ಹೊಂದಲಾಗಿತ್ತು. ಅದರಂತೆ ಕ್ಲಬ್‌ಫೂಟ್ ಸಮಸ್ಯೆ ಹೊಂದಿದ್ದ ಮಕ್ಕಳಿಗೆ ಈ ಸರ್ಜರಿ ಮಾಡಲಾಗಿದೆ.
ಈ ಕಾರ್ಯಕ್ರಮವು ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು. ಆಟೋಮೋಟಿವ್ ಆಕ್ಸೆಲ್ಸ್‌ನ ಅಧ್ಯಕ್ಷರು ಮತ್ತು ಪೂರ್ಣಾವಧಿ ನಿರ್ದೇಶಕರಾದ ನಾಗರಾಜ್ ಗರ್ಗೇಶ್ವರಿ, ಇಆರ್ ಮತ್ತು ಐಆರ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ವಿನಾಯಕ್ ಭಟ್, ಕಾನೂನು ಕಾರ್ಯದರ್ಶಿ ದೇಬದಾಸ್ ಪಾಂಡಾ ಮತ್ತು ವೈದ್ಯಾಧಿಕಾರಿ ಡಾ. ಪ್ರಫುಲ್ ಅಂಜನ್ ಎಚ್, ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ತಂಡ ಮತ್ತು ವೈದ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು.
ಅನುಭವ ಹಂಚಿಕೊಂಡ ಮಕ್ಕಳು
ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ನಾಲ್ಕರಿಂದ ಐದು ಮಕ್ಕಳು ತಾವು ಸಮಸ್ಯೆಯಿಂದ ಚೇತರಿಕೊಳ್ಳುತ್ತಿರುವ ಅನುಭವವನ್ನು ಹಂಚಿಕೊಂಡರು ಮತ್ತು ಈ ಚಿಕಿತ್ಸೆ ನೀಡಿದ್ದಕ್ಕಾಗಿ ಕೃತಜ್ಞತೆಯನ್ನೂ ವ್ಯಕ್ತಪಡಿಸಿದರು. ಈ ಸಕಾಲಿಕ ಶಸ್ತ್ರಚಿಕಿತ್ಸೆಯು ಆತ್ಮವಿಶ್ವಾಸದಿಂದ ನಡೆಯಲು ಹೇಗೆ ನೆರವಾಯಿತು ಮತ್ತು ತಮಗೆ ಹೇಗೆ ಆರೋಗ್ಯಕರ ಭವಿಷ್ಯ ನೀಡಿತು ಎಂಬುದು ಅವರ ಅನುಭವದಿಂದಲೇ ತಿಳಿಯುತ್ತದೆ.
ಈ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ನಿರ್ವಹಿಸಿದ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಕನ್ಸಲ್ಟಂಟ್ ಪೀಡಿಯಾಟ್ರಿಕ್ ಆರ್ಥೊಪಿಡಿಕ್ ಸರ್ಜನ್ ಡಾ. ಶ್ರೇಯಸ್ ಆಳ್ವಾ ಅವರನ್ನು ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನ ನಾಗರಾಜ್ ಗರ್ಗೇಶ್ವರಿ ಅವರು ಸನ್ಮಾನಿಸಿದರು. ಮಕ್ಕಳ ಜೀವನ ಸುಧಾರಣೆಗೆ ಡಾ. ಶ್ರೇಯಸ್ ಆಳ್ವಾ ಅವರು ಹೊಂದಿರುವ ಸಮರ್ಪಣಾ ಭಾವ ಮೆಚ್ಚಿ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್, ಅಧ್ಯಕ್ಷರು ಮತ್ತು ಪೂರ್ಣಕಾಲಿಕ ನಿರ್ದೇಶಕರಾದ ನಾಗರಾಜ್ ಗಾರ್ಗೇಶ್ವರಿ ಅವರು “ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್‌ನಲ್ಲಿ, ನಿಜವಾದ ಪ್ರಗತಿ ಎಂದರೆ ಕೇವಲ ವ್ಯವಹಾರಿಕ ಯಶಸ್ಸಿನಿಂದ ಮಾತ್ರವಲ್ಲ, ಸಮಾಜದಲ್ಲಿ ನಾವು ಉಂಟುಮಾಡುವ ಸಕಾರಾತ್ಮಕ ಪರಿಣಾಮದಿಂದ ಅಳೆಯಲಾಗುತ್ತದೆ ಎಂಬ ನಂಬಿಕೆ ನಮ್ಮದು. ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗಳೊಂದಿಗೆ ಈ ಉಪಕ್ರಮದ ಮೂಲಕ, ಕ್ಲಬ್‌ಫುಟ್‌ನಿಂದ ಬಳಲುತ್ತಿರುವ ಮಕ್ಕಳಿಗೆ ಜೀವನವನ್ನು ಬದಲಿಸುವ ಚಿಕಿತ್ಸೆಯನ್ನು ಬೆಂಬಲಿಸಲು ನಾವು ಹೆಮ್ಮೆಯಿಂದ ಮುಂದಾಗಿದ್ದೇವೆ. ಈ ಮಕ್ಕಳು ಆರೋಗ್ಯಕರ ಭವಿಷ್ಯದತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಇಡುವುದನ್ನು ನೋಡುವುದು ನಮಗೆ ಅತ್ಯಂತ ತೃಪ್ತಿದಾಯಕವಾಗಿದೆ. ಇಂತಹ ಅರ್ಥಪೂರ್ಣ ಸಹಭಾಗಿತ್ವಗಳ ಮೂಲಕ ಸೇವೆಗೆ ಅಸಾಧ್ಯವಾಗಿರುವ ಸಮುದಾಯಗಳಿಗೆ ಗುಣಮಟ್ಟದ ಆರೋಗ್ಯ ಸೇವೆಯನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ.” ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ಕ್ಲಬ್‌ಫೂಟ್‌ನಂತಹ ಜನ್ಮಜಾತ ಕಾಯಿಲೆಗಳನ್ನು ಪರಿಹರಿಸುವಲ್ಲಿ ಮತ್ತು ಸೌಲಭ್ಯ ವಂಚಿತ ಸಮುದಾಯಗಳ ಮಕ್ಕಳಿಗೂ ಸಕಾಲಿಕ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ಕಾರ್ಪೊರೇಟ್ ಮತ್ತು ಆರೋಗ್ಯ ಸೇವಾ ಸಂಸ್ಥೆಯ ಸಹಭಾಗಿತ್ವದ ಮೇಲೆ ಇರುವ ಮಹತ್ವವನ್ನು ಒತ್ತಿ ಹೇಳಿದರು.
ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಯ ಹಿರಿಯ ಉಪಾಧ್ಯಕ್ಷ ಮತ್ತು ಯೂನಿಟ್ ಹೆಡ್ ಎನ್.ಜಿ. ಭರತೀಶ ರೆಡ್ಡಿ ಅವರು ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನ ಸೇವಾ ಕಾರ್ಯವನ್ನು ಶ್ಲಾಘಿಸಿದರು ಮತ್ತು ಇಂತಹ ಸಹಯೋಗಗಳು ಸುಧಾರಿತ ವೈದ್ಯಕೀಯ ಸೇವೆ ಒದಗಿಸುವಲ್ಲಿ ಮತ್ತು ಮಕ್ಕಳಿಗೆ ಆರೋಗ್ಯಕರ ಜೀವನ ನಡೆಸಲು ಅನುವು ಮಾಡಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಈ ಸೇವಾ ಕಾರ್ಯವು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮತ್ತು ವಿಶೇಷ ಆರೋಗ್ಯ ರಕ್ಷಣೆ ಹೇಗೆ ಸಮಾಜದ ಮೇಲೆ ಅರ್ಥಪೂರ್ಣ ಮತ್ತು ಶಾಶ್ವತ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.
ಇದನ್ನೂ ಓದಿ: ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಯಾವುದೇ ಸಮಸ್ಯೆ ತಲೆದೋರಿಲ್ಲ: ಜಿ ಪರಮೇಶ್ವರ್
