Tejasvi Surya: ಮೆಟ್ರೋ ಪ್ರಯಾಣ ದರ ಹೆಚ್ಚಳ ಇಲ್ಲ ಎಂದ ತೇಜಸ್ವಿ ಸೂರ್ಯ

Mp Tejasvi Surya on metro ticket price hike

ಬೆಂಗಳೂರು: ಇದೇ ಫೆಬ್ರವರಿ 9 ರಿಂದ ಮೆಟ್ರೋ ಪ್ರಯಾಣ ದರ ಹೆಚ್ಚಳ ಇಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ತಿಳಿಸಿದ್ದಾರೆ. 

ಸೋಷಿಯಲ್‌ ಮೀಡಿಯಾದಲ್ಲಿ ಸೂರ್ಯ ಪೋಸ್ಟ್

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದ್ದು, ರಾಜ್ಯ‌ ಸರ್ಕಾರದ ಉದ್ದೇಶಿತ ಮೆಟ್ರೋ ದರ ಏರಿಕೆಯ ವಿರುದ್ಧ ಮಧ್ಯ ಪ್ರವೇಶಿಸುವಂತೆ ಕೋರಲಾಗಿತ್ತು.  ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೆಟ್ರೋ ದರ ಹೆಚ್ಚಳ ಮಾಡದಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

ಪೋಸ್ಟ್‌ನಲ್ಲಿ ಏನಿದೆ?

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಈಗಷ್ಟೇ ಸುದೀರ್ಘವಾಗಿ ಫೋನ್ ಮೂಲಕ ಚರ್ಚಿಸಿ, ಸೋಮವಾರದಿಂದ ಜಾರಿಗೆ ಬರಲಿರುವ ರಾಜ್ಯ ಸರ್ಕಾರದ ಬೆಂಗಳೂರು ಮೆಟ್ರೋ ದರದ ಅನ್ಯಾಯದ ಹೆಚ್ಚಳದ ವಿರುದ್ಧ ತಕ್ಷಣದ ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದೇನೆ. ಬೆಂಗಳೂರು, ಈಗಾಗಲೇ ಭಾರತದಲ್ಲೇ ಅತ್ಯಂತ ದುಬಾರಿ ಮೆಟ್ರೋ ದರವನ್ನು ಹೊಂದಿದೆ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಮತ್ತೊಂದು ದರ ಏರಿಕೆಯು ಲಕ್ಷಾಂತರ ನಾಗರಿಕರಿಗೆ ಸಾರ್ವಜನಿಕ ಸಾರಿಗೆಯನ್ನು ಎಟುಕದಂತೆ ಮಾಡುತ್ತದೆ. ಮೆಟ್ರೋದ ಉದ್ದೇಶವನ್ನೇ ವಿಫಲಗೊಳಿಸುತ್ತದೆ ಎಂದು ವಿವರಿಸಲಾಗಿದೆ. ಪ್ರಸ್ತಾವಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಅವರು ಸೂಚಿಸಿದ್ದು ,ಇದು ಸೋಮವಾರದಿಂದ ಜಾರಿಗೆ ಬರುವುದಿಲ್ಲ. ದರ ನಿಗದಿ ಸಮಿತಿಯಲ್ಲಿನ ಲೋಪದೋಷಗಳ ಬಗ್ಗೆ ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಅವರು ಭರವಸೆ ನೀಡಿದ್ದು, ರಾಜ್ಯ ಸರ್ಕಾರ ವಿನಂತಿಸಿದರೆ ಹೊಸ ಸಮಿತಿಯನ್ನು ರಚಿಸುವ ಬಗ್ಗೆ ಪರಿಗಣಿಸಬಹುದು ಎಂದು ತಿಳಿಸಿದ್ದಾರೆ. ಅವರ ಈ ತ್ವರಿತ ಪ್ರತಿಕ್ರಿಯೆಗೆ ನಾನು ಕೃತಜ್ಞನಾಗಿದ್ದೇನೆ. ಇದು ಕೇಂದ್ರ ಸರ್ಕಾರವು ಪ್ರಯಾಣಿಕರ ಹಿತದೃಷ್ಟಿಗೆ ಆದ್ಯತೆ ನೀಡಿ, ಕಾಂಗ್ರೆಸ್ ಸರ್ಕಾರದ ಅಸಮರ್ಥನೀಯ ದರ ಏರಿಕೆಯನ್ನು ತಡೆಹಿಡಿದಿರುವ ಮತ್ತೊಂದು ನಿದರ್ಶನವಾಗಿದೆ. ಈಗ ಪ್ರಶ್ನೆ ಸರಳ, ರಾಜ್ಯ ಸರ್ಕಾರವು ನಾಗರಿಕರ ಹಿತಾಸಕ್ತಿಯಿಂದ ಕಾರ್ಯನಿರ್ವಹಿಸುತ್ತದೆಯೇ ಅಥವಾ ಮತ್ತೆ ಸುಳ್ಳಿನ ಹಿಂದೆ ಅಡಗಿಕೊಳ್ಳುತ್ತದೆಯೇ? ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು, ಹೊಸ ಎಫ್‌ಎಫ್‌ಸಿ ಪಡೆಯುವ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಬೇಕು ಮತ್ತು ದರಗಳ ವೈಜ್ಞಾನಿಕ ಪರಿಷ್ಕರಣೆಗೆ ಅನುವು ಮಾಡಿಕೊಡಬೇಕು. ಮಾನ್ಯ ಮುಖ್ಯಮಂತ್ರಿಗಳೇ, ದಯವಿಟ್ಟು ಉತ್ತರಿಸಿ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಪಂಚ ದೇವಾಲಯ ಅನಾವರಣ ಮಾಡಿದ ಎಚ್‌ಕೆ ಪಾಟೀಲ್

Leave a Reply

Your email address will not be published. Required fields are marked *