ಬೆಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯೊಬ್ಬರ ವಿವಸ್ತ್ರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿಯವರು ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ (G Parameshwar) ತಿಳಿಸಿದ್ದಾರೆ.
ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ
ಬೆಂಗಳೂರಿನ ಗೃಹ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಸಿಐಡಿ ಸರ್ಕಾರಕ್ಕೆ ವರದಿ ನೀಡಿದ ನಂತರ ತಪ್ಪಿತಸ್ಥರು ಹಾಗೂ ಘಟನೆಯಲ್ಲಿ ಯಾರ ನಿರ್ಲಕ್ಷ್ಯವಿದೆ ಎಂಬುದನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಬಸವರಾಜ್ ಬೊಮ್ಮಾಯಿ
ಮತ್ತೊಂದೆಡೆ ಈ ಪ್ರಕರಣದ ಕುರಿತು ಮಾತನಾಡುತ್ತಾ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿರುವ ಸಂಸದ ಬಸವರಾಜ ಬೊಮ್ಮಾಯಿ, ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ. ಬೆಂಗಳೂರು ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಮಹಿಳೆಯೊಬ್ಬರ ವಿವಸ್ತ್ರಗೊಳಿಸಿರುವ ಪ್ರಕರಣ ಒಂದು ಅಮಾನುಷವಾದ ಘಟನೆಯಾಗಿದೆ. ಅದು ಪೊಲೀಸ್ ಇಲಾಖೆಯಿಂದ ನಡೆದಿದೆ ಎಂದು ಕೇಳಿಬರುತ್ತಿರುವ ಆರೋಪಗಳು ರಾಜ್ಯದಲ್ಲಿ ಗೃಹ ಇಲಾಖೆಯು ಹಿಡಿತ ಕಳೆದುಕೊಂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದರ ಸಂಕೇತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ವಾರ್ಷಿಕ ಆದಾಯ ಹೆಚ್ಚಳ: ಸಚಿವ ಮುನಿಯಪ್ಪ
