ಗದಗ: ಜಿಲ್ಲೆಯ ಐತಿಹಾಸಿಕ ತಾಣವಾಗಿರುವ ಲಕ್ಕುಂಡಿಯ ಪಂಚ ದೇವಾಲಯ ಮತ್ತು ಪಂಚ ಬಾವಿಗಳನ್ನು ಲಕ್ಕುಂಡಿಯಲ್ಲಿ ನಿನ್ನೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ (HK Patil) ಅನಾವರಣಗೊಳಿಸಿದರು.
ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯ ವಸ್ತು ಇಲಾಖೆ ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಾಸಕರಾದ ಸಿ.ಸಿ. ಪಾಟೀಲ್, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಲಕ್ಕುಂಡಿ ಪ್ರಾಧಿಕಾರ ಸದಸ್ಯ ಸಿದ್ದಲಿಂಗೇಶ್ ಪಾಟೀಲ್ ಉಪಸ್ಥಿತರಿದ್ದರು.
ಗತ ವೈಭವ ಮರಳಿ ತರಲು ನಿರ್ಧಾರ
ಬಳಿಕ ಮಾತನಾಡಿದ ಎಚ್.ಕೆ. ಪಾಟೀಲ್, ಲಕ್ಕುಂಡಿಯ ಗತ ವೈಭವ ಮರಳಿ ತರಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಕಳೆದ 15 ದಿನಗಳಿಂದ ಉತ್ಖನನ ಸಮಯದಲ್ಲಿ ಹಲವು ಐತಿಹಾಸಿಕ ಕುರುಹುಗಳು ಪತ್ತೆಯಾಗಿವೆ. ಪಂಚ ದೇವಾಲಯ ಬಾವಿ ಪತ್ತೆಹಚ್ಚಿ ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಿದ್ದು, ಲಕ್ಕುಂಡಿಯನ್ನು ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಹಾಗೆಯೇ, ಈ ಸಮಯದಲ್ಲಿ ಮಾತನಾಡಿದ ಸಿ.ಸಿ. ಪಾಟೀಲ್, ಲಕ್ಕುಂಡಿಯ ಪ್ರತಿ ಮನೆಗಳಲ್ಲಿಯೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಲವು ಶಿಲ್ಪ ಕಲಾಕೃತಿಗಳಿವೆ. ಜೊತೆಗೆ ಇಲ್ಲಿ ಅಪಾರ ಪ್ರಮಾಣದ ಐತಿಹಾಸಿಕ ಕುರುಹುಗಳು ದೊರೆತಿವೆ. ಈ ದಿಸೆಯಲ್ಲಿ ಪ್ರಾಚ್ಯ ವಸ್ತುಗಳನ್ನು ಸರ್ಕಾರಕ್ಕೆ ನೀಡುವ ಮೂಲಕ ಸ್ಥಳೀಯ ಜನರು ಸಹಕಾರ ನೀಡುತ್ತಿರುವುದು ಶ್ಲಾಘನಾರ್ಹ ಎಂದು ಹೇಳಿದರು
ಇದನ್ನೂ ಓದಿ: ಲಕ್ಕುಂಡಿ ಉತ್ಖನನಕ್ಕೆ ಕೇಂದ್ರದ ಸಹಕಾರ, ಸಂಸದ ಗದ್ದಿಗೌಡರ್ ಹೇಳಿದ್ದೇನು?
