ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್ಐ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುತ್ತಿದೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
600 ಪಿಎಸ್ಐ ನೇಮಕ
ಈ ವಿಚಾರವಾಗಿ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಹೊಸದಾಗಿ 600 ಪಿಎಸ್ಐ ಗಳ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಪಡೆಯಲಾಗಿದ್ದು, ಶೀಘ್ರವೇ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಶ್ನೋತ್ತರದ ಅವಧಿಯಲ್ಲಿ, ಶಾಸಕ ಚನ್ನಬಸಪ್ಪ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪೊಲೀಸ್ ನೇಮಕಾತಿ ಬಹಳ ವರ್ಷಗಳಿಂದ ನಡೆದಿಲ್ಲ. ವಿವಿಧ ಕಾರಣಗಳಿಂದ ನೇಮಕಾತಿ ವಿಳಂಬವಾಗಿತ್ತು. ಅವುಗಳನ್ನು ಬಗೆಹರಿಸಿಕೊಂಡು ಈಗಾಗಲೇ 947 ಪಿಎಸ್ಐ ಗಳನ್ನು ನೇಮಿಸಲಾಗಿದೆ. ಪೊಲೀಸ್ ಠಾಣೆಗೆ ಬಂದವರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಮತ್ತು ದೂರು ಸ್ವೀಕರಿಸಲು 103 ಗೃಹ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ 2025 ಮಂಡನೆ
ಇನ್ನು ಈ ಸಮಯದಲ್ಲಿ ಮಧ್ಯಮ ವರ್ಗದ ಬಾಡಿಗೆದಾರರ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ 2025ಅನ್ನು ಪರ್ಯಾಯಾಲೋಚನೆಗೆ ಮಂಡಿಸಿ ವಿವರ ನೀಡಿದ ಅವರು, 1960ರ ಬಾಡಿಗೆ ಕಾನೂನು, ಭೂ ಸುಧಾರಣಾ ಕಾನೂನು ಸೇರಿದಂತೆ ಹಲವಾರು ವಿಧೇಯಕಗಳು ಜಾರಿಗೆ ಬಂದಿದ್ದವು. ಆ ವೇಳೆ ರಾಜ್ಯ ನಿಯಂತ್ರಿತ ಆರ್ಥಿಕತೆ ವ್ಯವಸ್ಥೆಯಿತ್ತು. 35 ವರ್ಷಗಳ ಬಳಿಕ ಮಾರುಕಟ್ಟೆ ಆಧಾರಿತ ವ್ಯವಸ್ಥೆಗೆ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ ಸಂಸದರು ಸಂಸತ್ತಿನಲ್ಲಿ ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು: ಡಿಕೆ ಶಿವಕುಮಾರ
