ಕಬಾಬ್ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಆದ್ರೆ ಅನೇಕ ಜನರು ಬರೀ ಚಿಕನ್ ಹಾಗೂ ಮಟನ್ ಕಬಾಬ್ ಬಗ್ಗೆ ಮಾತ್ರ ಕೇಳಿರುತ್ತಾರೆ. ನೀವು ಮನೆಯಲ್ಲಿ ಸಸ್ಯಹಾರಿ ಕಬಾಬ್ ಸಹ ಮಾಡಬಹುದು. ಹೌದು, ಮನೆಯಲ್ಲಿ ಗಲೌಟಿ ಕಬಾಬ್ (Galouti Kebabs) ಮಾಡಿ ಎಂಜಾಯ್ ಮಾಡಬಹುದು. ಅದರ ಸೂಪರ್ ಈಸಿ ರೆಸಿಪಿ ಇಲ್ಲಿದೆ.
ಗಲೌಟಿ ಕಬಾಬ್ (Galouti Kebabs) ಮಾಡಲು ಬೇಕಾಗುವ ಪದಾರ್ಥಗಳು
1 ಕಪ್ ಬೇಯಿಸಿದ ಕಡಲೆ
1 ಕಪ್ ಬೇಯಿಸಿದ ಕ್ವಿನೋವಾ
2 ಈರುಳ್ಳಿ, ಸಣ್ಣಗೆ ಕತ್ತರಿಸಿಕೊಂಡಿರಿ
3 ಹಸಿ ಮೆಣಸಿನಕಾಯಿ, ಸಣ್ಣಗೆ ಕತ್ತರಿಸಿಕೊಳ್ಳಿ
ಕೊತ್ತಂಬರಿ ಎಲೆಗಳು, ಸಣ್ಣಗೆ ಕತ್ತರಿಸಿಕೊಂಡಿರಿ
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಟೀಸ್ಪೂನ್ ಗರಂ ಮಸಾಲಾ
1 ಟೀಸ್ಪೂನ್ ಜೀರಿಗೆ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
1 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
3 ಚಮಚ ಕಡಲೆ ಹಿಟ್ಟು
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ
ಸಸ್ಯಾಹಾರಿ ಗಲೌಟಿ ಕಬಾಬ್ ಮಾಡುವ ಸುಲಭ ವಿಧಾನ ಇಲ್ಲಿದೆ
ಮೊದಲು ಬೇಯಿಸಿದ ಕಡಲೆ ಮತ್ತು ಕ್ವಿನೋವಾವನ್ನು ಫುಡ್ ಬ್ಲೆಂಡರ್‌ನಲ್ಲಿ ಹಾಕಿ, ಒರಟಾಗಿ ಪೇಸ್ಟ್ ಮಾಡಿಕೊಳ್ಳಿ. ಇದನ್ನ ಪುಡಿ ಪುಡಿ ಮಾಡಿಕೊಂಡರೆ ಬಹಳ ಉತ್ತಮ. ನಂತರ ಈ ಮಿಶ್ರಣವನ್ನ ಒಂದು ಬೌಲ್‌ಗೆ ಹಾಕಿ. ಈಗ ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಗರಂ ಮಸಾಲ, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ ಹಾಕಿ ಮಿಶ್ರಣ ಮಾಡಿ. ನಂತರ ಇದಕ್ಕೆ ಮತ್ತೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.ಒಮ್ಮೆ ಮಸಾಲಾಗಳ ಟೇಸ್ಟ್ ನೋಡಿ ಅಗತ್ಯ ಇದ್ದರೆ ಮತ್ತಷ್ಟು ಹಾಕಿ.
ಈಗ ಈ ಮಿಶ್ರಣಕ್ಕೆ ಕಡಲೆ ಹಿಟ್ಟು ಸೇರಿಸಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಅಗತ್ಯ ಇದ್ದಷ್ಟು ನೀರನ್ನ ಹಾಕಿ. ಕೆಲವೊಮ್ಮೆ ನೀರು ಹಾಕದೇ ಹಿಟ್ಟು ಹಾಗೂ ಪದಾರ್ಥಗಳು ಒಟ್ಟಿಗೆ ಸೇರುವುದಿಲ್ಲ. ಈಗ ಈ ಮಿಶ್ರಣವನ್ನ ಸಮಾನ ಭಾಗಗಳಲ್ಲಿ ವಿಂಗಡನೆ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಕಬಾಬ್ ಆಕಾರದಲ್ಲಿ ಮಾಡಿ.
ನಂತರ ಒಂದು ನಾನ್-ಸ್ಟಿಕ್ ಪ್ಯಾನ್ ತೆಗೆದುಕೊಂಡು ಮಧ್ಯಮ ಉರಿಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ. ಒಮ್ಮೆ ಆರಿದ ನಂತರ, ಆಕಾರದ ಕಬಾಬ್‌ಗಳನ್ನು ಪ್ಯಾನ್ ಮೇಲೆ ಎಚ್ಚರಿಕೆಯಿಂದ ಇಡಿ. ಈ ಕಬಾಬ್‌ಗಳನ್ನು ಪ್ರತಿ ಬದಿಯಲ್ಲಿ 4-5 ನಿಮಿಷ ಬೇಯಿಸಿ. ಅಗತ್ಯ ಇದ್ದರೆ ಸ್ವಲ್ಪ ಎಣ್ಣೆ ಹಚ್ಚಿ, ಅವು ಗೋಲ್ಡನ್ ಬಣ್ಣಕ್ಕೆ ಬರುವವರೆಗೂ ಹಾಗು ಗರಿಗರಿಯಾಗುವವರೆಗೆ ಪ್ರತಿ 2-3 ನಿಮಿಷಗಳಿಗೊಮ್ಮೆ ಉಲ್ಟಾ -ಪಲ್ಟಾ ಮಾಡಿ ಫ್ರೈ ಮಾಡಿ. ಕಬಾಬ್ ಆದ ನಂತರ ಕಬಾಬ್‌ಗಳನ್ನು ಪ್ಯಾನ್‌ನಿಂದ ತೆಗೆದು ಪ್ಲೇಟ್‌ನಲ್ಲಿ ಹಾಕಿ. ಅದರ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನ ಹಾಗೂ ನಿಂಬೆ ರಸವನ್ನ ಹಾಕಿದರೆ ಗಲೌಟಿ ಕಬಾಬ್ ಸವಿಯಲು ಸಿದ್ದ.
ಇದನ್ನೂ ಓದಿ: ಬಟಾಣಿಯಲ್ಲಿದೆ ಸಾವಿರಾರು ಪೋಷಕಾಂಶಗಳು, ಗಟ್ಟಿಯಾಗುತ್ತೆ ಮೂಳೆಗಳು
