ಟಿಕ್ಕಿ ಅಂದ್ರೆ ಮಕ್ಕಳ ಫೇವರೇಟ್ ಸ್ನ್ಯಾಕ್ಸ್, ನೀವು ಸಂಜೆ ಶಾಲೆಯಿಂದ ಬಂದ ನಂತರ ಯಾವುದೇ ಟಿಕ್ಕಿ ಮಾಡಿಕೊಟ್ಟರೂ ಮಾತಿಲ್ಲದೇ ಹೊಟ್ಟೆಗೆ ಇಳಿಸುತ್ತಾರೆ. ಅನೇಕ ಮಕ್ಕಳು ಶಾಲೆಯಿಂದ ಬರುವಾಗ ಅಂಗಡಿಯಿಂದ ಅದನ್ನ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ವೆರೈಟಿ ಟಿಕ್ಕಿ ಮಾಡಬಹುದು. ಟಿಕ್ಕಿ ಅಂದರೆ ಸಾಮಾನ್ಯವಾಗಿ ಅನಾರೋಗ್ಯಕರ ಎನ್ನುವವರೂ ಅನೇಕ ಜನ ಇದ್ದಾರೆ. ಆದರೆ ಮನೆಯಲ್ಲಿ ಆರೋಗ್ಯಕರ ಟಿಕ್ಕಿ ಮಾಡುವುದು ತುಂಬಾ ಸುಲಭ. ಹೌದು, ನೀವು ಎಂದಾದರೂ ಅಂಜೂರ ಟಿಕ್ಕಿ ಬಗ್ಗೆ ಕೇಳಿದ್ದೀರಾ? ಇದು ಕೇಳಲು ವಿಚಿತ್ರವಾಗಿದ್ದರೂ ಸಹ ಬಹಳ ರುಚಿಕರ. ಹಾಗಾದ್ರೆ ಅಂಜೂರ್ ಟಿಕ್ಕಿ (Anjeer Tikki) ಮಾಡುವುದು ಹೇಗೆ ಎಂಬುದು ಇಲ್ಲಿದೆ.
ಅಂಜೂರ್ ಟಿಕ್ಕಿ (Anjeer Tikki) ಮಾಡಲು ಬೇಕಾಗುವ ಪದಾರ್ಥಗಳು
50 ಗ್ರಾಂ ಅಂಜೂರ
20 ಗ್ರಾಂ ಆಲೂಗಡ್ಡೆ (ಬೇಯಿಸಿಕೊಂಡಿರಿ)
2-3 ಹಸಿ ಮೆಣಸಿನಕಾಯಿ (ಸಣ್ಣಗೆ ಹೆಚ್ಚಿಕೊಂಡಿರಿ)
25 ಗ್ರಾಂ ತಾಜಾ ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿಕೊಂಡಿರಿ)
3 ಗ್ರಾಂ ಗರಂ ಮಸಾಲ
4 ಗ್ರಾಂ ಚಾಟ್ ಮಸಾಲಾ
4 ಗ್ರಾಂ ಜೀರಿಗೆ ಪುಡಿ
20 ಗ್ರಾಂ ಹುರಿದ ಕಡಲೆ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
100 ಮಿಲಿ ಎಣ್ಣೆ
ಅಂಜೂರ್ ಟಿಕ್ಕಿ ಮಾಡುವ ಸುಲಭ ವಿಧಾನ ಹೀಗಿದೆ
ಮೊದಲು ಬೇಕಾದಷ್ಟು ಅಂಜೂರದ ಹಣ್ಣುಗಳನ್ನು ತೆಗೆದುಕೊಂಡು ಬೆಚ್ಚಗಿನ ನೀರಿನಲ್ಲಿ ಮೃದುವಾಗುವವರೆಗೆ ನೆನೆಸಿಡಿ. ನಂತರ ಹಿಟ್ಟನ್ನ ತಯಾರಿಸಲು ಮೊದಲು ನೆನೆಸಿದ ಅಂಜೂರದ ಹಣ್ಣುಗಳನ್ನು ತೆಗೆದುಕೊಂಡು, ಸಣ್ಣಗೆ ಕತ್ತರಿಸಿ ಮ್ಯಾಶ್ ಮಾಡಿ, ಅದಕ್ಕೆ ಹೆಚ್ಚಿಕೊಂಡ ತಾಜಾ ಕೊತ್ತಂಬರಿ, ಹಸಿ ಮೆಣಸಿನಕಾಯಿ ಮತ್ತು ಚಿಟಿಕೆ ಉಪ್ಪು ಸೇರಿಸಿ ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳನ್ನ ಚೆನ್ನಾಗಿ ಕಲಸಿಕೊಂಡರೆ ನಿಮ್ಮ ಫಿಲ್ಲಿಂಗ್ ಸಿದ್ದವಾಗುತ್ತದೆ.
ನಂತರ ಬೇಯಿಸಿದ ಆಲೂಗಡ್ಡೆಯನ್ನು ತೆಗೆದುಕೊಂಡು, ಮ್ಯಾಶ್ ಮಾಡಿ, ಅದಕ್ಕೆ ಗರಂ ಮಸಾಲ, ಜೀರಿಗೆ ಪುಡಿ, ಚಾಟ್ ಮಸಾಲ, ಸಣ್ಣಗೆ ಹೆಚ್ಚಿಕೊಂಡ ತಾಜಾ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು ಮತ್ತು ಹುರಿದ ಕಡಲೆ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟು ತಯಾರಿಸಿಕೊಳ್ಳಿ. ಈಗ ಈ ಹಿಟ್ಟಿನಿಂದ ಉಂಡೆ ರೀತಿ ಮಾಡಿಕೊಳ್ಳಿ. ಈ ಉಂಡೆಯನ್ನ ಚಪ್ಪಟೆ ಆಕಾರದಲ್ಲಿ ಮಾಡಿ, ಅದಕ್ಕೆ ಒಂದು ಚಮಚ ಅಂಜೂರದ ಹೂರಣವನ್ನು ಹಾಕಿ, ಪ್ರತಿ ಉಂಡೆಯನ್ನು ಮತ್ತೆ ರೌಡ್ ಮಾಡಿ, ಅದನ್ನ ಚಪ್ಪಟೆ ಮಾಡಿ.

ಎಲ್ಲಾ ಟಿಕ್ಕಿಗಳು ರೆಡಿಯಾದ ನಂತರ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು, ಅಡುಗೆ ಎಣ್ಣೆಯನ್ನು ಹಾಕಿ ಮತ್ತು ಎಣ್ಣೆಯನ್ನು ಬಿಸಿ ಮಾಡಿ. ನಂತರ ಮಾಡಿಕೊಂಡ ಟಿಕ್ಕಿಗಳನ್ನ ಒಂದೊಂದಾಗಿ ಬಾಣಲೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದರೆ ಅಂಜೂರ್ ಟಿಕ್ಕಿ ರೆಡಿ. ಇದನ್ನ ಪುದೀನ ಚಟ್ನಿ ಮತ್ತು ಹುಣಸೆ ಚಟ್ನಿಯೊಂದಿಗೆ ಸೇವನೆ ಮಾಡಿ.
ಇದನ್ನೂ ಓದಿ: ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತೆ ಈ ತರಕಾರಿ, ಕುಂಬಳಕಾಯಿ ಪ್ರಯೋಜನಗಳಿವು
