ಹುಬ್ಬಳ್ಳಿ: ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಗಿದ ಬಳಿಕ ಕ್ಯಾಬಿನೆಟ್ ವಿಸ್ತರಣೆಗೆ ಅವಕಾಶ ಇದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ (Saleem Ahmed) ತಿಳಿಸಿದ್ದಾರೆ.
ಹೈಕಮಾಂಡ್ ನಿರ್ಧಾರ ಮಾಡಲಿದೆ
ಹುಬ್ಬಳ್ಳಿಯಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾಬಿನೆಟ್ ವಿಸ್ತರಣೆ ಕುರಿತ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಲಿದೆ. ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶದಿಂದ ಸುಮಾರು ಐವತ್ತರಷ್ಟು ಮಂತ್ರಿಗಳನ್ನು ಸಂಘಟನೆ ಕಾರ್ಯಕ್ಕೆ ನಿಯೋಜಿಸಬೇಕು ಎಂಬ ಮನವಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ಆ ಸ್ಥಾನಗಳನ್ನು ಹೊಸಬರಿಗೆ ನೀಡಬೇಕು ಎಂಬ ಅಭಿಪ್ರಾಯವೂ ಪಕ್ಷದೊಳಗೆ ಇದೆ ಎಂದರು.
ಇದನ್ನೂ ಓದಿ: ಉಕ್ಕಿನ ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರದಿಂದ ಹಣ: ಎಚ್‌ಡಿ ಕುಮಾರಸ್ವಾಮಿ
ಕಾಂಗ್ರೆಸ್‌ನಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ
ಪಕ್ಷದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಸ್ಪಷ್ಟಪಡಿಸಿದ ಸಲೀಂ ಅಹ್ಮದ್, ಕೆಲ ಶಾಸಕರು ನೀಡಿರುವ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳು ಮಾತ್ರ ಎಂದು ಹೇಳಿದರು. ಪಕ್ಷದಲ್ಲಿ ಪ್ರಜಾಪ್ರಭುತ್ವವಿದ್ದು ಎಲ್ಲರಿಗೂ ಮಾತನಾಡುವ ಸ್ವಾತಂತ್ರ್ಯ ಇದೆ. ಯತಿಂದ್ರ ಅವರ ಹೇಳಿಕೆಯೂ ವೈಯಕ್ತಿಕ ಅಭಿಪ್ರಾಯವೇ ಆಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕೂಡ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿರುವುದಾಗಿ ಸಲೀಂ ಅಹ್ಮದ್ ತಿಳಿಸಿದರು.
