ಬೆಂಗಳೂರು: ಮಧ್ಯಪ್ರಾಚ್ಯ ದೇಶಗಳ ಯುದ್ಧದಿಂದಾಗಿ ವಾಣಿಜ್ಯ ಸಿಲಿಂಡರ್‌ಗಳಿಗೆ ಅಲ್ಪ ಪ್ರಮಾಣದಲ್ಲಿ ಸಮಸ್ಯೆ ಉಂಟಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಯಾವುದೇ ಸಮಸ್ಯೆ ತಲೆದೋರಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಅಕ್ರಮವಾಗಿ ಮಾರಾಟ ಮಾಡಿದ್ರೆ ಕ್ರಮ
ತುಮಕೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಅವರು, ವಾಣಿಜ್ಯ ಸಿಲಿಂಡರ್ ಸಮಸ್ಯೆಯಿಂದಾಗಿ ಹೋಟೆಲ್ ಉದ್ಯಮದವರಿಗೆ ಒಂದೆರೆಡು ದಿನ ಸಮಸ್ಯೆ ಆಗಬಹುದು. ಆದರೆ ಇದನ್ನೇ ನೆಪ ಮಾಡಿಕೊಂಡು ಕಾಳಸಂತೆಯಲ್ಲಿ ವಾಣಿಜ್ಯ ಸಿಲಿಂಡರ್ ಮಾರಾಟ ಮಾಡಲು ಮುಂದಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೆಟ್ರೋಲ್-ಡಿಸೇಲ್‌ಗೂ ಸಮಸ್ಯೆ ಆಗಲ್ಲ
ತುಮಕೂರು ಜಿಲ್ಲೆಯಲ್ಲಿ ಸಹ ಸದ್ಯಕ್ಕೆ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲೇ ಸಿಲಿಂಡರ್ ಗಳ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ ಪೆಟ್ರೋಲ್, ಡೀಸೆಲ್ ಗೂ ಯಾವುದೇ ತೊಂದರೆಯಾಗದು ಎಂದು ಸಚಿವರು ಹೇಳಿದರು. ಇದೇ ವೇಳೆ ಒಳಮೀಸಲಾತಿ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಡಾ. ಜಿ. ಪರಮೇಶ್ವರ್, ಇದೇ 27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಒಳಮೀಸಲಾತಿ ಗೊಂದಲ ಬಗೆಹರಿಯುವ ಸಾಧ್ಯತೆ ಇದೆ. ಸರ್ಕಾರಿ ಆದೇಶ ಹೊರಬಿದ್ದ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
