ಬೆಂಗಳೂರು: ರಾಜ್ಯದಲ್ಲಿ ‘ಯುವನಿಧಿ’ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ನಿರುದ್ಯೋಗಿ ಪದವೀಧರರಿಗೆ ನೀಡಲಾಗುತ್ತಿರುವ ಮಾಶಾಸನವನ್ನು ಸರ್ಕಾರವು ಸ್ಥಗಿತಗೊಳಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಂತಿನ ರೂಪದಲ್ಲಿ ಹಣ
2026-27ನೇ ಸಾಲಿನ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಯೋಜನೆಯಡಿ ನೋಂದಾಯಿತರಾಗಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೆ ಕಂತಿನ ರೂಪದಲ್ಲಿ ಹಣವನ್ನು ನಿಯಮಿತವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿಯೂ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ 600 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಮೀಸಲಿಡಲಾಗಿದ್ದು, ಮಾಸಿಕವಾಗಿ ನೀಡುವ ಆರ್ಥಿಕ ನೆರವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲಾಗುವುದು ಎಂದು ಅವರು ಸದನಕ್ಕೆ ಭರವಸೆ ನೀಡಿದರು.
ವಿರೋಧ ಪಕ್ಷದಿಂದ ಆಕ್ಷೇಪ
ಇದೇ ಸಂದರ್ಭದಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ ಅವರು, ಸರ್ಕಾರವು ಈಗ ನಿಗದಿಪಡಿಸಿರುವ ಅನುದಾನವು ರಾಜ್ಯದ ಒಟ್ಟು ಫಲಾನುಭವಿಗಳ ಸಂಖ್ಯೆಗೆ ಹೋಲಿಸಿದರೆ ಸಾಲುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು
