ನವದೆಹಲಿ: ಸೈಬರ್ ಸುರಕ್ಷತೆಗೆ ಸರ್ಕಾರ ಅತಿ ಹೆಚ್ಚಿನ ಒತ್ತು ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಸೈಬರ್ ಅಪರಾಧ ತಡೆಯುವ ವ್ಯವಸ್ಥೆ ದೇಶದಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಸೈಬರ್ ಆಧಾರಿತ ಅಪರಾಧಗಳ ತಡೆ ಕಾರ್ಯಕ್ರಮ
ದೆಹಲಿಯಲ್ಲಿಂದು ‘ ಸೈಬರ್ ಆಧಾರಿತ ಅಪರಾಧಗಳ ತಡೆ ‘ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಅವರು, ಡಿಜಿಟಲ್ ಹಣ ಪಾವತಿ ಸೇರಿದಂತೆ ಎಲ್ಲ ಬಗೆಯ ಸೈಬರ್ ಸುರಕ್ಷತೆಗೆ ಅಗತ್ಯ ಕ್ರಮ ರೂಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದರು. ಕಳೆದ 11 ವರ್ಷಗಳಲ್ಲಿ ದೇಶದಲ್ಲಿ ಡಿಜಿಟಲೀಕರಣ ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿಗೊಂಡಿದ್ದು, 2014ರಲ್ಲಿ 25 ಕೋಟಿ ಅಂತರ್ಜಾಲ ಬಳಕೆ ಇದ್ದು, ಪ್ರಸ್ತುತ ಈ ಪ್ರಮಾಣ 100 ಕೋಟಿ ದಾಟಿದೆ. ಬ್ರಾಡ್ ಬ್ಯಾಂಡ್ ಸಂಪರ್ಕ 16 ಪಟ್ಟು ಏರಿಕೆ ಕಂಡಿದ್ದು, 100 ಕೋಟಿ ದಾಟಿದೆ. ಒಂದು ಜಿಬಿ ಡೇಟಾ ಮೌಲ್ಯ ಶೇಕಡಾ 97ರಷ್ಟು ಕಡಿಮೆಯಾಗಿದೆ ಎಂದರು.
181 ಬಿಲಿಯನ್ ಸಂಖ್ಯೆಯ ಡಿಜಿಟಲ್ ವ್ಯವಹಾರ
2014ರಲ್ಲಿ ಕೇವಲ 546 ಗ್ರಾಮ ಪಂಚಾಯಿತಿಗಳು ಭಾರತ್ ನೆಟ್ ಜತೆ ಸಂಪರ್ಕ ಹೊಂದಿದ್ದು, ಈಗ ಈ ಸಂಖ್ಯೆ 2 ಲಕ್ಷಕ್ಕೂ ಹೆಚ್ಚಾಗಿದೆ. 2024ರಲ್ಲಿ ಯುಪಿಐ ಮೂಲಕ 233 ಟ್ರಿಲಿಯನ್ ರೂಪಾಯಿ ಮೌಲ್ಯದಷ್ಟು ಹಾಗೂ 181 ಬಿಲಿಯನ್ ಸಂಖ್ಯೆಯ ಡಿಜಿಟಲ್ ಹಣ ಪಾವತಿಯಾಗಿದೆ. ಜಗತ್ತಿನ ಸುಮಾರು ಶೇಕಡಾ 50ರಷ್ಟು ಡಿಜಿಟಲ್ ಪಾವತಿ ಭಾರತದಲ್ಲಿ ಆಗುತ್ತಿದೆ ಎಂದು ಹೇಳಿದರು. 2024ರಲ್ಲಿ ಒಟ್ಟು ಹಣಕಾಸು ವ್ಯವಹಾರಗಳ ಶೇಕಡಾ 97ರಷ್ಟು ಡಿಜಿಟಲ್ ಮೂಲಕ ನಡೆದಿದ್ದು, ಈವರೆಗೆ 57 ಕೋಟಿಗಿಂತಲೂ ಹೆಚ್ಚು ಜನ್ ಧನ್ ಬ್ಯಾಂಕ್ ಖಾತೆ ಆರಂಭಗೊಂಡಿದೆ ಎಂದರು. ಪ್ರಸಕ್ತ ಪರಿಸ್ಥಿತಿಯಲ್ಲಿ ಸೈಬರ್ ಸುರಕ್ಷತೆ ಖಾತ್ರಿಪಡಿಸಲು ರಾಷ್ಟ್ರೀಯ ತನಿಖಾ ಏಜೆನ್ಸಿ – ಎನ್ಐಎ, ಜಾರಿ ನಿರ್ದೇಶನಾಲಯ, ಭಾರತೀಯ ರಿಸರ್ವ್ ಬ್ಯಾಂಕ್, ಸಿಬಿಐ, ಮಾಹಿತಿ ತಂತ್ರಜ್ಞಾನ ಸಚಿವಾಲಯ, ದೂರ ಸಂಪರ್ಕ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಅಂಗ ಸಂಸ್ಥೆಗಳು ಸಮನ್ವಯದಿಂದ ಒಗ್ಗೂಡಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಇದೆ ಎಂದು ಹೇಳಿದರು.
ಇದನ್ನೂ ಓದಿ: 29 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ
