ಶಿವಮೊಗ್ಗ: ದೇಶಾದ್ಯಂತ ಆಕಾಶವಾಣಿ ಮತ್ತು ದೂರದರ್ಶನದ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ ಸುಮಾರು 2.500 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್ (L Murugan) ಹೇಳಿದ್ದಾರೆ.
10 ಕಿಲೋವ್ಯಾಟ್ ಟ್ರಾನ್ಸ್‌ಮೀಟರ್ ಲೋಕಾರ್ಪಣೆ
ಶಿವಮೊಗ್ಗ ನಗರದ ವಿದ್ಯಾನಗರದಲ್ಲಿರುವ ಪ್ರಸಾರ ಭಾರತಿ ಕೇಂದ್ರದಲ್ಲಿ ನೂತನವಾಗಿ ಅಳವಡಿಸಿರುವ 10 ಕಿಲೋವ್ಯಾಟ್ ಟ್ರಾನ್ಸ್‌ಮೀಟರ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಈಗ ಅತ್ಯುತ್ತಮ ಧ್ವನಿ ಗುಣಮಟ್ಟಕ್ಕಾಗಿ ಡಿಜಿಟಲ್ ರೇಡಿಯೋ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಕಾಶವಾಣಿ ವಿಸ್ತರಣಾ ಯೋಜನೆ
ದೇಶದ ಮೂಲೆ ಮೂಲೆಗೂ ಆಕಾಶವಾಣಿ ತಲುಪುತ್ತಿದ್ದು, ಎಲ್ಲಾ 23 ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಶಿವಮೊಗ್ಗ ಆಕಾಶವಾಣಿಯ ಈ ಯೋಜನೆ ಒಂದೇ ವರ್ಷದಲ್ಲಿ ಪೂರ್ಣಗೊಂಡಿದ್ದು, ಉಡುಪಿ ಮತ್ತು ಬೆಂಗಳೂರಿನಲ್ಲಿ ಆಕಾಶವಾಣಿ ವಿಸ್ತರಣಾ ಯೋಜನೆಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದರು. ಆಕಾಶವಾಣಿಯು ಜನರನ್ನು ಸುಲಭವಾಗಿ ತಲುಪುವ ಮಾರ್ಗವಾಗಿರುವುದರ ಜೊತೆಗೆ, ವಿಶೇಷವಾಗಿ ವಿಪತ್ತುಗಳು ಅಥವಾ ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸುಲಭ, ತ್ವರಿತ ಹಾಗೂ ನೈಜ ಸುದ್ದಿಗಳನ್ನು ತಲುಪಿಸುವ ವಿಶ್ವಾಸಾರ್ಹ ಮಾಧ್ಯಮವಾಗಿದೆ ಎಂದು ಅವರು ತಿಳಿಸಿದರು.
