ನವದೆಹಲಿ: ಪ್ರಸಕ್ತ ಬಜೆಟ್ ನಲ್ಲಿ (Budget 2026) ಕರ್ನಾಟಕಕ್ಕೆ ರೈಲ್ವೆ ಯೋಜನೆಗಳಿಗಾಗಿ ಈ ಬಾರಿ ದಾಖಲೆಯ 7 ಸಾವಿರದ 748 ಕೋಟಿ ರೂಪಾಯಿ ಒದಗಿಸಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
950 ಕೋಟಿ ರೂಪಾಯಿ ಮೊತ್ತದ ಯೋಜನೆ
ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 52 ಸಾವಿರದ 950 ಕೋಟಿ ರೂಪಾಯಿ ಮೊತ್ತದ ಯೋಜನೆಗಳು ಪ್ರಗತಿಯಲ್ಲಿವೆ. ಅಲ್ಲದೆ, ಬೆಂಗಳೂರು – ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ನಡುವೆ ಎರಡು ಬುಲೆಟ್ ರೈಲುಗಳ ಸೇವೆ ಘೋಷಿಸಲಾಗಿದ್ದು, ಇದರಿಂದ ಮಹತ್ತರ ಬದಲಾವಣೆಯಾಗಲಿದ್ದು, ಬೆಂಗಳೂರಿನಿಂದ ಚೆನ್ನೈಗೆ ಪ್ರಯಾಣದ ಅವಧಿ 1 ಗಂಟೆ 13 ನಿಮಿಷ, ಬೆಂಗಳೂರಿನಿಂದ ಹೈದರಾಬಾದ್ ಗೆ ಎರಡು ತಾಸು ಇರಲಿದೆ. ಇದರಿಂದ ತಯಾರಿಕೆ, ವಿನ್ಯಾಸ ಮತ್ತು ಐಟಿ ಸೇವಾ ಕ್ಷೇತ್ರಗಳಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡಿಗೂ 7 ಸಾವಿರ ಕೋಟಿ
ತಮಿಳುನಾಡಿನಲ್ಲಿ ರೈಲ್ವೆ ಮಾರ್ಗ ಶೀಘ್ರದಲ್ಲೇ ಶೇಕಡ 100ರಷ್ಟು ವಿದ್ಯುಧೀಕರಣಗೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿಯಲ್ಲಿ ಅವರು, ತಮಿಳುನಾಡಿಗೆ ಪ್ರಸಕ್ತ ಬಜೆಟ್ ನಲ್ಲಿ 7 ಸಾವಿರದ 611 ಕೋಟಿ ರೂಪಾಯಿ ಒದಗಿಸಲಾಗಿದೆ. ಚೆನ್ನೈ-ಬೆಂಗಳೂರು ಮತ್ತು ಚೆನ್ನೈ- ಹೈದರಾಬಾದ್ ನಡುವೆ ಎರಡು ಹೊಸ ಬುಲೆಟ್ ರೈಲುಗಳನ್ನು ಘೋಷಿಸಲಾಗಿದೆ. ಇದಲ್ಲದೆ, ರಾಜ್ಯದಲ್ಲಿ 77 ಅಮೃತ್ ಭಾರತ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ ಸದ್ಯ ಶೇಕಡ 97ರಷ್ಟು ಮಾರ್ಗ ವಿದ್ಯುಧೀಕರಣಗೊಂಡಿದೆ ಎಂದು ತಿಳಿಸಿದ್ದಾರೆ.
