ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ (Karaga) ಮಹೋತ್ಸವದ ಅಂಗವಾಗಿ ಧರ್ಮರಾಯಸ್ವಾಮಿ ದೇವಸ್ಥಾನದ ಪೂರ್ವಸಿದ್ಧತೆಗಳ ಬಗ್ಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ನೇತೃತ್ವದಲ್ಲಿಂದು ದೇವಸ್ಥಾನದ ಸುತ್ತಲಿನ ಸ್ಥಳ ಪರಿಶೀಲನೆ ನಡೆಯಿತು.
ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ
ಆಯುಕ್ತರು ದೇವಸ್ಥಾನ ಆಡಳಿತ ಮಂಡಳಿಯವರೊಂದಿಗೆ ಹಾಗೂ ಸಂಬಂಧಪಟ್ಟ ನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವತಿಯಿಂದ ಕೈಗೊಳ್ಳಬೇಕಾದ, ಕರಗ ಹಾದುಹೋಗುವ ಸ್ಥಳಗಳಲ್ಲಿ ರಸ್ತೆ ದುರಸ್ತಿ, ಒಳಚರಂಡಿಗಳ ಮ್ಯಾನ್‌ಹೋಲ್‌ಗಳ ದುರಸ್ತಿ, ರಸ್ತೆ ಗುಂಡಿ ಮುಚ್ಚುವುದು ಇನ್ನಿತರ ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಏಪ್ರಿಲ್ 1ರ ಮಧ್ಯರಾತ್ರಿ ಕರಗ ಆರಂಭ
ಬೆಂಗಳೂರಿನ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವ ಏಪ್ರಿಲ್ 1ರ ಮಧ್ಯರಾತ್ರಿ ನಡೆಯಲಿದೆ. ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಕರಗ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಇದರ ಮೊದಲ ಭಾಗವಾಗಿ ಮಾರ್ಚ್ 31ರಂದು ಹಸಿ ಕರಗ ನಡೆಯಲಿದೆ. 11 ದಿನಗಳ ಕಾಲ ನಡೆಯುವ ಉತ್ಸವದಲ್ಲಿ 16ನೇ ಬಾರಿಗೆ ಅರ್ಚಕ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ.
