Bangladesh: ಬಾಂಗ್ಲಾಗೆ ಐಸಿಸಿಯಿಂದ ಮತ್ತೊಂದು ಶಾಕ್‌, ಮಾಧ್ಯಮಗಳಿಗೂ ನಿರ್ಬಂಧ

Bangladesh Journalists Denied T20 World Cup 2026 Access

ನವದೆಹಲಿ: ಟೀ 20 ವಿಶ್ವಕಪ್‌ ವಿಚಾರದಲ್ಲಿ ಐಸಿಸಿ ಹಾಗೂ ಬಾಂಗ್ಲಾದೇಶದ (Bangladesh) ನಡುವಿನ ಗುದ್ದಾಟ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಒಂದೆಡೆ ಐಸಿಸಿ ಪಂದ್ಯವನ್ನ ಸ್ಥಳಾಂತರ ಮಾಡದಿರಲು ನಿರ್ಧಾರ ಮಾಡಿದ್ದು, ಈ ನಡುವೆ ನಮ್ಮ ಪತ್ರಕರ್ತರಿಗೆ ಸಹ ಪಂದ್ಯಾವಳಿಗೆ ನಿಷೇಧ ಹೇರಲಾಗಿದೆ ಎಂದು ಬಾಂಗ್ಲಾ ಮಾಧ್ಯಮಗಳು ಆರೋಪ ಮಾಡಿದೆ.

ಬಾಂಗ್ಲಾ ಪತ್ರಕರ್ತರ ಅರ್ಜಿ ತಿರಸ್ಕರಿಸಿದ ಐಸಿಸಿ

ಭಾರತದಲ್ಲಿ ನಡೆಯುವ ಟೀ 20 ಪಂದ್ಯಗಳನ್ನ ಭದ್ರತೆ ದೃಷ್ಟಿಯಿಂದ ಶ್ರೀಲಂಕಾಗೆ ಸ್ಥಳಾಂತರ ಮಾಡುವಂತೆ ಬಾಂಗ್ಲಾದೇಶ ಐಸಿಸಿಗೆ ಮನವಿ ಸಲ್ಲಿಕೆ ಮಾಡಿತ್ತು. ಆದರೆ ಇದಕ್ಕೆ ಒಪ್ಪದ ಐಸಿಸಿ ಬಾಂಗ್ಲಾ ಬದಲಾಗಿ ಸ್ಕಾಟ್ಲೆಂಡ್‌ಗೆ ಅವಕಾಶ ನೀಡುತ್ತಿದೆ. ಇದೀಗ ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಬಾಂಗ್ಲಾ ಮಾಧ್ಯಮಗಳಿಗೆ ನಿಷೇಧ ಹೇರಲಾಗಿದೆ ಎನ್ನುವ ಮಾಹಿತಿ ಇದೆ. ಬಿಸಿಬಿ ಮಾಧ್ಯಮ ಸಮಿತಿಯ ಅಧ್ಯಕ್ಷ ಅಮ್ಜಾದ್ ಹೊಸೇನ್ ಅವರ ಪ್ರಕಾರ, ಬಾಂಗ್ಲಾದೇಶದ 130 ರಿಂದ 150 ಪತ್ರಕರ್ತರು 2026 ರ ಟಿ 20 ವಿಶ್ವಕಪ್‌ಗೆ ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರೆಲ್ಲರಿಗೂ ಐಸಿಸಿ ಮಾನ್ಯತೆ ನಿರಾಕರಿಸಿದೆ.

ಬಾಂಗ್ಲಾದ ಮುಂದಿನ ನಡೆ ಏನು?

ಈ ವಿಚಾರವಾಗಿ ಮಾತನಾಡಿದ ಅಮ್ಜಾದ್, ನನಗೆ ತಿಳಿದಿರುವಂತೆ, ಎಲ್ಲಾ ಬಾಂಗ್ಲಾದೇಶದ ಪತ್ರಕರ್ತರ ಅರ್ಜಿಯನ್ನ ತಿರಸ್ಕರಿಸಲಾಗಿದೆ. ಈ ವರ್ಷ ಸುಮಾರು 130 ರಿಂದ 150 ಪತ್ರಕರ್ತರು ಅರ್ಜಿ ಸಲ್ಲಿಸಿದ್ದರು, ಆದರೆ ಯಾರಿಗೂ ಮಾನ್ಯತೆ ಸಿಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಜನವರಿ 20 ಮತ್ತು 21 ರಂದು ಅನುಮೋದನೆ ಪಡೆದ ಕೆಲವು ಛಾಯಾಗ್ರಾಹಕರ ಮಾನ್ಯತೆಗಳನ್ನು ಈಗ ರದ್ದುಗೊಳಿಸಲಾಗಿದೆ ಎನ್ನಲಾಗಿದೆ.

ಜನವರಿ 20 ರಂದು ಐಸಿಸಿ ಮಾಧ್ಯಮ ವಿಭಾಗದಿಂದ ನನಗೆ ಅನುಮೋದನೆ ಇಮೇಲ್ ಬಂದಿತು, ಅದರಲ್ಲಿ ವೀಸಾ ಪತ್ರವೂ ಸೇರಿತ್ತು. ಆದರೆ ಇಂದು ನನ್ನ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪತ್ರಕರ್ತ ಮಿರ್ ಫರೀದ್ ಹೇಳಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದೇಶವು 1999 ರಿಂದ ಐಸಿಸಿ ಕಾರ್ಯಕ್ರಮಗಳ ಭಾಗವಾಗಿದೆ, ಆದರೆ ಪತ್ರಕರ್ತರು ಅದಕ್ಕೂ ಮೊದಲಿನಿಂದಲೂ  ಪಂದ್ಯಾವಳಿಗಳನ್ನು ವರದಿ ಮಾಡುತ್ತಿದ್ದಾರೆ. ಇನ್ನು 1996 ರ ವಿಶ್ವಕಪ್ ವರದಿ ಮಾಡಿದ್ದ ಬಾಂಗ್ಲಾದೇಶದ ಪತ್ರಕರ್ತ ಅರಿಫರ್ ರೆಹಮಾನ್ ಬಾಬು ಸಹ ತಮಗೆ ಮಾನ್ಯತೆ ನಿರಾಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

“ಒಂದು ತಂಡ ಆಡದಿದ್ದರೂ ಸಹ, ಐಸಿಸಿ ಅಸೋಸಿಯೇಟ್ ಸದಸ್ಯ ರಾಷ್ಟ್ರದ ಪತ್ರಕರ್ತರು ಇನ್ನೂ ಮಾನ್ಯತೆ ಪಡೆಯಬಹುದು. ಎಲ್ಲರೂ ತಿರಸ್ಕರಿಸಲ್ಪಟ್ಟಿದ್ದಕ್ಕೆ ನನಗೆ ಯಾವುದೇ ಕಾರಣ ಸಿಗುತ್ತಿಲ್ಲ. ನನಗೆ ಆಶ್ಚರ್ಯವಾಗಿದೆ, ಮತ್ತು ನಾನು ಈ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೆಯೇ,  ಬಾಂಗ್ಲಾದೇಶ ಕ್ರೀಡಾ ಪತ್ರಕರ್ತರ ಸಂಘದ (BSJA) ಅಧ್ಯಕ್ಷರೂ ಆಗಿರುವ ಅರಿಫೂರ್, ಎಲ್ಲರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ಪಂದ್ಯ ಆಡಲ್ವಾ ಪಾಕ್?‌ ಎಚ್ಚರಿಕೆ ಕೊಟ್ರು ಬುದ್ದಿ ಕಲಿಯದ ಪಿಸಿಬಿ

Leave a Reply

Your email address will not be published. Required fields are marked *