ನವದೆಹಲಿ: ಸೌತ್ ಬ್ಲಾಕ್ನಲ್ಲಿ ಮೊನ್ನೆ ನಡೆದ ಅಂತಿಮ ಸಚಿವ ಸಂಪುಟದ ಸಭೆಯಲ್ಲಿ 1.60 ಲಕ್ಷ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ನಿನ್ನೆ ತಿಳಿಸಿದ್ದಾರೆ.
ಸ್ಟಾರ್ಟ್ಅಪ್ ಇಂಡಿಯಾ ನಿಧಿ
ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾಹಿತಿ ನೀಡಿದ ಅವರು, ಈ ಬಾರಿಯ ಬಜೆಟ್ನಲ್ಲಿ ಘೋಷಿಸಲಾದ ನಗರ ಸವಾಲು ನಿಧಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಸಚಿವ ಸಂಪುಟವು ಅನುಮೋದನೆ ನೀಡಿದೆ ಈ ಯೋಜನೆಯು ಒಂದು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಪ್ರಮುಖ ಕೈಗಾರಿಕಾ ನಗರಗಳನ್ನು ಒಳಗೊಳ್ಳುತ್ತದೆ. 10 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸ್ಟಾರ್ಟ್ಅಪ್ ಇಂಡಿಯಾ ನಿಧಿ 2.0 ಅನ್ನು ಸಹ ಸಂಪುಟವು ಅನುಮೋದಿಸಿದೆ ಎಂದರು.
ಮೂರು ಮಲ್ಟಿಟ್ರ್ಯಾಕ್ ಯೋಜನೆಗಳಿಗೆ ಕೇಂದ್ರ ಒಪ್ಪಿಗೆ
ಇದರ ಜೊತೆಗೆ, ಕರ್ನಾಟಕ, ದೆಹಲಿ, ಹರಿಯಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಾದ್ಯಂತ ಒಟ್ಟು 12 ಜಿಲ್ಲೆಗಳನ್ನು ಒಳಗೊಂಡ ಮೂರು ಮಲ್ಟಿಟ್ರ್ಯಾಕ್ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದರಲ್ಲಿ ಬಳ್ಳಾರಿ ಮತ್ತು ಹೊಸಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ ಯೋಜನೆಯು ರಾಜ್ಯದ ಉಕ್ಕು ಮತ್ತು ಗಣಿಗಾರಿಕಾ ಕೇಂದ್ರವಾದ ಬಳ್ಳಾರಿ ಪ್ರದೇಶದಲ್ಲಿ ದಟ್ಟಣೆಯನ್ನು ನಿವಾರಿಸಿ, ಸರಕು ಸಾಗಣೆಯನ್ನು ಸುಗಮಗೊಳಿಸಲಿದೆ. ಈ ಯೋಜನೆಯು ಹೊಸಪೇಟೆಯಿಂದ ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಮತ್ತು ವಿಜಯ ವಿಠ್ಠಲ ದೇವಾಲಯ ಮುಂತಾದ ಪ್ರಮುಖ ಪ್ರವಾಸಿ ತಾಣಗಳಿಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು ಗೋಹ್ಪುರ್ ಮತ್ತು ನುಮಲಿಗಢ ನಡುವೆ, 18 ಸಾವಿರದ 662 ಕೋಟಿ ರೂಪಾಯಿ ವೆಚ್ಚದಲ್ಲಿ ಅವಳಿ ಕೊಳವೆ ಸುರಂಗ ಮಾರ್ಗಕ್ಕೆ ಸಂಪುಟ ಅನುಮೋದನೆ ನೀಡಿದೆ. ಇದು ನಾಲ್ಕು ಪಥಗಳ ನೀರೊಳಗಿನ ಸುರಂಗವಾಗಿದ್ದು, ಒಟ್ಟು 15.8 ಕಿಲೋ ಮೀಟರ್ ಉದ್ದವನ್ನು ಹೊಂದಿದೆ. ಇದು ಭಾರತದ ಮೊದಲ ನೀರೊಳಗಿನ ಅವಳಿ ಕೊಳವೆ ರೈಲು ಮತ್ತು ರಸ್ತೆ ಸುರಂಗವಾಗಿದೆ ಎಂದರು.
ಇದನ್ನೂ ಓದಿ: ಅಸ್ಸಾಂನಲ್ಲಿ ನರೇಂದ್ರ ಮೋದಿ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ
