ನವದೆಹಲಿ: ಬಾಹ್ಯಕಾಶ ವಲಯದಲ್ಲಿ ಅಪ್ರತಿಮ ಸಾಧನೆ ಮಾಡಿದ ಗ್ರೂಪ್ ಕ್ಟಾಪ್ಟನ್ ಶುಭಾಂಶು ಶುಕ್ಲಾ (Shubhanshu Shukla) ಅವರಿಗೆ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದೆಹಲಿಯಲ್ಲಿ ಇಂದು ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ನೀಡಿ ಗೌರವಿಸಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ, ಇತಿಹಾಸ ನಿರ್ಮಿಸಿದ ಗ್ರೂಪ್ ಕ್ಟಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ, ಅಶೋಕ ಚಕ್ರ ನೀಡಿರುವುದು ಹೆಮ್ಮೆಯ ವಿಚಾರವಾಗಿದೆ.
ಯಾರಿಗೆಲ್ಲಾ ಶೌರ್ಯ ಪ್ರಶಸ್ತಿ?
ಇನ್ನುಳಿದಂತೆ ಸಶಸ್ತ್ರ ಪಡೆಗಳಲ್ಲಿ ಅಪ್ರತಿಮ ಶೌರ್ಯ ಪ್ರದರ್ಶಿಸಿದ 70 ಮಂದಿ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಆರು ಮರಣೋತ್ತರ ಪ್ರಶಸ್ತಿಗಳು ಸೇರಿವೆ. ಮೇಜರ್ ಅರ್ಷದೀಪ್ ಸಿಂಗ್, ನೈಬ್ ಸುಬೇದಾರ್ ದೋಲೇಶ್ವರ ಸುಬ್ಬಾ ಸಿಂಗ್ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರಿಗೆ ಕೀರ್ತಿ ಚಕ್ರಗಳನ್ನು ಪ್ರಧಾನ ಮಾಡಲಾಗಿದೆ.
ಇದರೊಂದಿಗೆ, ಒಂದು ಮರಣೋತ್ತರ ಸೇರಿದಂತೆ 13 ಶೌರ್ಯ ಚಕ್ರಗಳು, ಒಂದು ಸೇನಾ ಪದಕಕ್ಕೆ ಒಂದು ಶೌರ್ಯ ಬಾರ್, ಐದು ಮರಣೋತ್ತರ ಸೇರಿದಂತೆ 44 ಶೌರ್ಯ ಸೇನಾ ಪದಕಗಳು, ಆರು ಶೌರ್ಯ ಸೇನಾ ಪದಕಗಳು ಮತ್ತು ಎರಡು ಶೌರ್ಯ ವಾಯು ಸೇನಾ ಪದಕಗಳನ್ನು ಸಹ, ಸಶಸ್ತ್ರ ಪಡೆಗಳ ಸಿಬ್ಬಂದಿಗೆ ನೀಡಲಾಗುವುದು. ಸಶಸ್ತ್ರ ಪಡೆಗಳು ಮತ್ತು ಇತರ ಸಿಬ್ಬಂದಿಗೆ 301 ಮಿಲಿಟರಿ ಪದಕಗಳನ್ನು ರಾಷ್ಟ್ರಪತಿ ಘೋಷಿಸಿದ್ದಾರೆ. ಇವುಗಳಲ್ಲಿ 30 ಪರಮ ವಿಶಿಷ್ಟ ಸೇವಾ ಪದಕಗಳು, ನಾಲ್ಕು ಉತ್ತಮ ಯುದ್ಧ ಸೇವಾ ಪದಕ , 56 ಅತಿ ವಿಶಿಷ್ಟ ಸೇವಾ ಪದಕ ಸೇರಿದಂತೆ 135 ವಿಶಿಷ್ಟ ಸೇವಾ ಪದಕಗಳು ಸೇರಿವೆ.
ಇದನ್ನೂ ಓದಿ: ಶತವಧಾನಿ ಗಣೇಶ್‌ಗೆ ಪದ್ಮ ಭೂಷಣ ಗೌರವ, ರಾಜ್ಯದ 8 ಜನರಿಗೆ ಪ್ರಶಸ್ತಿ
