ಶೃಂಗೇರಿ: ಮಾಧ್ಯಮ ಲೋಕದಲ್ಲಿ ಹೊಸ ಅಲೆಯನ್ನ ಸೃಷ್ಟಿಸಲು ಸಜ್ಜಾಗಿರುವ ವಿದ್ಯಾರ್ಥಿವಾಣಿ (Vidyarthi Vaani) ವೆಬ್ಸೈಟ್ ಇಂದು ಲೋಕಾರ್ಪಣೆ ಆಗಿದ್ದು, ದಕ್ಷಿಣಮ್ನಾಯ ಶೃಂಗೇರಿ ಶಾರದ ಪೀಠದ 36ನೇ ಜಗದ್ಗುರುಗಳಾದ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಶಿಷ್ಯರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದ್ದಾರೆ.
ವಿದ್ಯಾರ್ಥಿವಾಣಿ ಧ್ಯೇಯ
ವಿದ್ಯಾರ್ಥಿ ವಾಣಿ ಒಂದು ತರಬೇತಿ ಆಧಾರಿತ ವಿದ್ಯಾರ್ಥಿ ಪತ್ರಿಕೋದ್ಯಮ ವೇದಿಕೆ. ವಿದ್ಯಾರ್ಥಿ ವಾಣಿ ಒಂದು ಸ್ವತಂತ್ರ, ನಿಷ್ಪಕ್ಷಪಾತ ಹಾಗೂ ವಿದ್ಯಾರ್ಥಿ ಕೇಂದ್ರಿತ ಪತ್ರಿಕೋದ್ಯಮ ವೇದಿಕೆಯಾಗಿದೆ. ಇದರ ಮೂಲ ಉದ್ದೇಶವು ಸುದ್ದಿ ವ್ಯಾಪಾರ ಮಾಡುವುದಲ್ಲ; ಬದಲಾಗಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮದ ನೈಜ ಅರಿವು, ಪ್ರಾಯೋಗಿಕ ತರಬೇತಿ ಮತ್ತು ಕ್ಷೇತ್ರ ಅನುಭವವನ್ನು ಒದಗಿಸುವುದು.
ನಾವು ವಿದ್ಯಾರ್ಥಿಗಳನ್ನು ಕೇವಲ ಓದುಗರಾಗಿ ರೂಪಿಸುವುದಿಲ್ಲ, ಅವರನ್ನು ಜವಾಬ್ದಾರಿಯುತ ವರದಿಗಾರರು ಮತ್ತು ಸಮಾಜದ ಅರಿವಿರುವ ನಾಗರಿಕರಾಗಿ ಬೆಳೆಸಲು ಕೆಲಸ ಮಾಡುತ್ತೇವೆ. ಸತ್ಯವನ್ನು ಹುಡುಕುವ ಪ್ರಕ್ರಿಯೆ, ವಿಷಯವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಅದನ್ನು ಸಮಾಜದ ಮುಂದೆ ಹೊಣೆಗಾರಿಕೆಯಿಂದ ಮಂಡಿಸುವ ಮನೋಭಾವನೆ – ಈ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದೇ ವಿದ್ಯಾರ್ಥಿ ವಾಣಿಯ ಧ್ಯೇಯ.
