ಬೆಂಗಳೂರು: ರಾಜ್ಯಪಾಲರ ವಿರುದ್ಧ ಕಾನೂನು ಸಮರಕ್ಕೆ ರಾಜ್ಯ ಸರ್ಕಾರ (Politics) ಮುಂದಾಗಿದ್ದು, ಈ ವಿಚಾರವಾಗಿ ರಾಜ್ಯದ ಎಜಿ ಶಶಿಕಿರಣ್ ಶೆಟ್ಟಿ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ನಾಳೆ ತನಕ ಕಾಯಲು ನಿರ್ಧಾರ
ಸದ್ಯದ ಮಾಹಿತಿಗಳ ಪ್ರಕಾರ, ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಜಟಾಪಟಿ ನಡೆಯುತ್ತಿದೆ. ರಾಜ್ಯಪಾಲರ ಅನುಮತಿ ಇಲ್ಲದೇ ಅಧಿವೇಶನ ನಡೆಸಲು ಆಗುವುದಿಲ್ಲ. ಹಾಗಾಗಿ ನಾಳೆ ತನಕ ಕಾಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ನಾಳೆ ರಾಜ್ಯಪಾಲರು ಭಾಷಣಕ್ಕೆ ಬರ್ತಾರೆ ಎನ್ನುವ ವಿಶ್ವಾಸದಲ್ಲಿ ಸರ್ಕಾರ ಇದ್ದು, ಬರದೇ ಇದ್ದರೆ ಕಾನೂನು ಹೋರಾಟಕ್ಕೂ ರಾಜ್ಯ ಸರ್ಕಾರದ ತಯಾರಿ ಇದೆ ಎನ್ನಲಾಗಿದೆ.
ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ
ರಾಜ್ಯ ಸರ್ಕಾರ ಈಗಾಗಲೇ ಸುಪ್ರೀಂ ಕೋರ್ಟ್ ಸಿಜೆಐ ಮುಂದೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಿದ್ದು, ಈ ಅರ್ಜಿಯ ಡ್ರಾಫ್ಟ್ ಸಿದ್ದಪಡಿಸಲು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಎಜಿ ಶಶಿಕಿರಣ್ ಶೆಟ್ಟಿಗೆ ಸಿಎಂ ಸಿದ್ದರಾಮಯ್ಯ ಅವರು ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಎಜಿ ಶಶಿಕಿರಣ್ ಶೆಟ್ಟಿ ದೆಹಲಿಗೆ ತೆರಳಿದ್ದಾರೆ.
ಎರಡು ಪ್ರಮುಖ ಅಂಶಗಳ ಮೇಲೆ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ ಮಾಡಲಾಗಿದ್ದು, ಮುಖ್ಯವಾಗಿ ರಾಜ್ಯಪಾಲರು ಸರ್ಕಾರದ ಭಾಷಣವನ್ನ ಸದನದಲ್ಲಿ ಓದಬೇಕು ಹಾಗೂ ಸಾಂವಿಧಾನಿಕವಾಗಿ ಇರುವ ಕರ್ತವ್ಯವನ್ನ ರಾಜ್ಯಪಾಲರು ಪಾಲನೆ ಮಾಡಬೇಕು ಸುಪ್ರೀಂ ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಸಾಂವಿಧಾನಿಕ ಬಿಕ್ಕಟ್ಟು ಉದ್ಭವವಾಗಿದೆ ಹೀಗಾಗಿ ಸುಪ್ರೀಂ ಮಧ್ಯ ಪ್ರವೇಶಿಸಿ ರಾಜ್ಯಪಾಲರಿಗೆ ನಿರ್ದೇಶನ ನೀಡುವಂತೆ ಸಹ ಕೋರಲು ಯೋಚಿಸಲಾಗಿದೆ.
ಇದನ್ನೂ ಓದಿ: ಎಲೆ ಅಡಿಕೆ ಉಗುಳಿದ್ದಕ್ಕೆ ಜಗಳ, ಎರಡು ಕುಟುಂಬಗಳ ನಡುವೆ ಮಾರಾಮಾರಿ
