ರಾಯಚೂರು: ರಾಯಚೂರಿನ (Raichuru) ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುತ್ತಿರೊ ಶಾಸಕಿ ಕರೆಮ್ಮಾ ನಾಯಕ್ ಅವರಿಗೆ ದಂಧೆಕೋರು ಬೆದರಿಕೆ ಹಾಕಿದ್ದಾರೆ.
ಶಾಸಕರ ಮನೆಗೆ ನುಗ್ಗಿ ಬೆದರಿಕೆ
ಮಾಹಿತಿಗಳ ಪ್ರಕಾರ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕದಂತೆ ದಂಧೆಕೋರರು ಶಾಸಕರ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ರಾಯಚೂರಿನ ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮಾ ನಾಯಕ್ ಅವರು ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜನವರಿ 18 ರಂದು ಅಕ್ರಮ ಮರಳು ದಂಧೆ ವಿರುದ್ಧ ಪೊಲೀಸರು ಕ್ರಮಕೈಗೊಂಡಿದ್ದರು.
ದೇವದುರ್ಗ ಠಾಣೆಯಲ್ಲಿ ಅಕ್ರಮ ಮರಳು ಸಾಗಾಟ ವಿಚಾರವಾಗಿ ಏಳು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆ ಜೆಸಿಬಿ,ಟಿಪ್ಪರ್,ಟ್ರಾಕ್ಟರ್ ಗಳು ಸೇರಿ ಏಳು ವಾಹನಗಳು ಜಪ್ತಿ ಮಾಡಲಾಗಿತ್ತು. ಹಾಗಾಗಿ ದಂಧೆಕೋರರು ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ.
ಪೊಲೀಸರಿಗೆ ದೂರು ನೀಡಿದ ಶಾಸಕಿ
ದಂಧೆಕೋರರು ಮನೆಗೆ ನುಗ್ಗಿ ಬೆದರಿಕೆ ಹಿನ್ನೆಲೆಯಲ್ಲಿ ರಾಯಚೂರು ಎಸ್ ಪಿ ಅರುಣಾಂಗ್ಷುಗಿರಿ ಅವರಿಗೆ ಶಾಸಕಿ ಕರೆಮ್ಮಾ ನಾಯಕ್ ದೂರು ನೀಡಿದ್ದು, ಬೆದರಿಕೆ ಹಾಕಿರುವವರಿಗೆ ಹಾಗೂ ಅಕ್ರಮ ಮರಳು ದಂಧೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ ಕರೆಮ್ಮಾ ನಾಯಕ್ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದೇನೆ. ಜಿಲ್ಲಾಧಿಕಾರಿಗಳ ಜೊತೆಗಿನ ಸಭೆಯಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. ಈ ಬಗ್ಗೆ ಪೊಲೀಸರು ಅಕ್ರಮ ಮರಳು ದಂಧೆ ಬಗ್ಗೆ ಕ್ರಮಕೈಗೊಂಡಿದ್ದಾರೆ.. ಹೀಗಾಗಿ ನನ್ನ ಮನೆಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಬಗ್ಗೆ ನನ್ನ ಬೆಂಬಲಿಗರೊಬ್ಬರು ದೇವದುರ್ಗ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಜಿಪಿ ಪ್ರಕರಣ, ಸರ್ಕಾರಿ ಕಚೇರಿಗೆ ಸಿಸಿಟಿವಿ ಹಾಕುವಂತೆ ಸ್ನೇಹಮಯಿ ಕೃಷ್ಣ ಮನವಿ
