ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತೀಯ ಸೇನಾ ದಿನದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಅವರು ಪಾಲ್ಗೊಂಡು, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.
ಆಪರೇಷನ್ ಸಿಂಧೂರ್ ಮುಂದುವರೆದಿದೆ
ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಮುಂದುವರಿದಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ದುಸ್ಸಾಹಸಗಳಿಗೆ ದೃಢವಾಗಿ ಪ್ರತಿಕ್ರಿಯೆ ನೀಡಲಾಗುವುದು. ಆಪರೇಷನ್ ಸಿಂಧೂರ್ ಮೂರೂ ಸೇನಾಪಡೆಗಳ ಸಮನ್ವಯ, ಸ್ಪಷ್ಟವಾದ ರಾಜಕೀಯ ನಿರ್ದೇಶನ ಮತ್ತು ಸೇನೆಗೆ ದೊರೆತ ಸಂಪೂರ್ಣ ಸ್ವಾತಂತ್ರ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಜಗತ್ತು ಇಂದು ಹಲವು ರೀತಿಯ ಸಂಘರ್ಷಗಳನ್ನು ಎದುರಿಸುತ್ತಿದ್ದು, ಜಾಗತಿಕ ಬದಲಾವಣೆಗಳು ಗೋಚರಿಸುತ್ತಿವೆ. ದೇಶಗಳು ಯಾವುದೇ ಪರಿಸ್ಥಿತಿಗೆ ಸನ್ನದ್ಧವಾಗಿರಬೇಕು ಎಂಬುದನ್ನು ಸದ್ಯದ ಪರಿಸ್ಥಿತಿ ಸೂಚಿಸುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಖಚಿತ ಪ್ರತಿಕ್ರಿಯೆ ನೀಡುವಲ್ಲಿ ಭಾರತದ ದೃಢವಾದ ಸಂಕಲ್ಪವನ್ನು ಆಪರೇಷನ್ ಸಿಂಧೂರ್ ಪ್ರತಿಬಿಂಬಿಸುತ್ತದೆ. ಈ ಕಾರ್ಯಾಚರಣೆ ಭಾರತೀಯ ಸೇನೆಯ ಸನ್ನದ್ಧತೆ ಮತ್ತು ಕಾರ್ಯತಂತ್ರವನ್ನು ಸಹ ಜಗತ್ತಿಗೆ ತಿಳಿಸಿದೆ ಎಂದು ಹೇಳಿದರು.
ಜಂಟಿ ಸಹಭಾಗಿತ್ವ, ಆತ್ಮನಿರ್ಭರತೆಗೆ ಒತ್ತು ನೀಡಿರುವುದು ಮತ್ತು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡುತ್ತಿರುವುದು ನಮ್ಮ ವಿಶೇಷತೆಯಾಗಿದೆ. ಇದು ಭಾರತೀಯ ಸೇನೆಯ ಪರಿವರ್ತನೆಯ ದಶಕವಾಗಿದೆ. 2025ರಲ್ಲಿ ಕೈಗೊಂಡ ಅಭಿವೃದ್ಧಿ ಗಮನಾರ್ಹವಾಗಿದೆ. ಸೇನೆಯ ಆಧುನೀಕರಣಕ್ಕೆ ಒತ್ತು ನೀಡಲಾಗುತ್ತಿದ್ದು, ಹಲವು ಸಕಾರಾತ್ಮಕ ಬದಲಾವಣೆಗಳನ್ನು ತರಲಾಗಿದೆ ಎಂದು ತಿಳಿಸಿದರು.
ರಕ್ಷಣಾ ವಲಯದ ಆತ್ಮನಿರ್ಭರತೆ
ರಕ್ಷಣಾ ವಲಯದ ಆತ್ಮನಿರ್ಭರತೆಯಿಂದ ಸೇನಾಪಡೆಗಳ ಸಾಮರ್ಥ್ಯ ಹೆಚ್ಚಳವಾಗಿದೆ. ಸಾಮರ್ಥ್ಯ ವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಹೆಚ್ಚಿಸುವ ಕಾರ್ಯ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ತಂತ್ರಜ್ಞಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದೇವೆ. ಸೇನಾ ನಿವೃತ್ತರ ಕಲ್ಯಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಭಾರತೀಯ ಸೇನೆ ಯಾವುದೇ ತುರ್ತು ಸಂದರ್ಭಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಲಕ್ಷದ್ವೀಪ್ ನಲ್ಲಿ ವೈದ್ಯಕೀಯ ಶಿಬಿರ ಉದ್ಘಾಟನೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
