ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹತಾ ಮಾನದಂಡದ ಪ್ರಕಾರ ನಿಗದಿಯಾಗಿರುವ ವಾರ್ಷಿಕ ಆದಾಯದ ಮಿತಿಯನ್ನ ಹೆಚ್ಚಳ ಮಾಡುವ ಅಗತ್ಯ ಇದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ (KH Muniyappa) ಹೇಳಿದ್ದಾರೆ.
ಬಹಳಷ್ಟು ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ವಂಚಿತ
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರದ ಅವಧಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 1.20 ಲಕ್ಷ ರೂಪಾಯಿ ಆದಾಯದ ಮಿತಿಯನ್ನು ಹೆಚ್ಚಳ ಮಾಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ಪ್ರಸ್ತುತ ದಿನಗಳಲ್ಲಿ ಕನಿಷ್ಠ ದಿನಗೂಲಿಯೇ 500 ರೂಪಾಯಿಗಳಿದೆ. ಇದನ್ನು ಒಟ್ಟು ಲೆಕ್ಕ ಹಾಕಿದರೆ ವಾರ್ಷಿಕ ಆದಾಯ 1.80 ಲಕ್ಷ ರೂಪಾಯಿಗಳಾಗಲಿದೆ. ಹೀಗಾಗಿ ಬಹಳಷ್ಟು ಕುಟುಂಬಗಳು ಬಿಪಿಎಲ್ ಸೌಲಭ್ಯದಿಂದ ವಂಚಿತವಾಗುತ್ತಿವೆ. ಇದನ್ನು ಪರಿಷ್ಕರಣೆ ಮಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ.
ಬಿಪಿಎಲ್ ಕಾರ್ಡ್ ನಿಂದ ಎಪಿಎಲ್ ಗೆ ಪರಿವರ್ತನೆಯಾಗಿರುವ 5 ಲಕ್ಷ ಕಾರ್ಡ್ಗಳನ್ನು ಪುನರ್ ಪರಿಶೀಲಿಸಲು ನಿನ್ನೆ ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಅರ್ಹ ಫಲಾನುಭವಿಗಳು ಬಿಪಿಎಲ್ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರಿಕೆ ವಹಿಸಲಾಗುವುದು. ಅರ್ಹರು ತಹಸೀಲ್ದಾರರಿಗೆ ಅರ್ಜಿ ನೀಡಿದರೆ 15 ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ದೇಶದಲ್ಲೇ ಜಿ ಎಸ್ ಟಿ ತೆರಿಗೆ ಪಾವತಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರ ಪ್ರಮಾಣ ಶೇ. 50ರಷ್ಟು ಮೀರಬಾರದು. ರಾಜ್ಯದಲ್ಲಿ ಅದನ್ನು ಮೀರಿ ಬಿಪಿಎಲ್ ಕಾರ್ಡ್ಗಳಿವೆ ಎಂದು ಹೇಳಿದ್ದಾರೆ.
440 ಉಪಸ್ಥಾವರಗಳ ನಿರ್ಮಾಣ: ಕೆ.ಜೆ.ಜಾರ್ಜ್
ಗುಣಮಟ್ಟದ ವಿದ್ಯುತ್ ಪೂರೈಕೆಗೆ ಪೂರಕವಾಗಿ ರಾಜ್ಯದಲ್ಲಿ ಹೆಚ್ಚುವರಿಯಾಗಿ 440 ಉಪಸ್ಥಾವರಗಳ ನಿರ್ಮಾಣಕ್ಕೆ ಸರ್ಕಾರ ಯೋಜನೆ ಸಿದ್ಧ ಪಡಿಸಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಂಗಾರಪೇಟೆ ಕ್ಷೇತ್ರದ ಎಸ್.ಎನ್.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರ ನೀಡಿದ ಅವರು, ಈವರೆಗೂ ವರ್ಷಕ್ಕೆ 40 ಉಪಸ್ಥಾವರಗಳನ್ನು ನಿರ್ಮಿಸಲಾಗುತ್ತಿತ್ತು. ಪ್ರಸಕ್ತ ವರ್ಷ 100 ಉಪಸ್ಥಾವರಗಳ ನಿರ್ಮಾಣವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ಪ್ರಸಕ್ತ ಹಣಕಾಸು ವರ್ಷಕ್ಕಾಗಿ ಪೂರಕ ಅಂದಾಜುಗಳ 2ನೇ ಕಂತಿನ ಬೇಡಿಕೆಗಳಿಗೆ ವಿಧಾನಸಭೆ ಅಂಗೀಕಾರ ನೀಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ಮಂಡಿಸಿದ ಪೂರಕ ಅಂದಾಜುಗಳಿಗೆ ಸುದೀರ್ಘ ಚರ್ಚೆಯ ನಂತರ ಧ್ವನಿಮತದ ಒಪ್ಪಿಗೆ ದೊರೆದಿದೆ.
ಇದನ್ನೂ ಓದಿ: ಯಾವುದೇ ಸರ್ಕಾರಿ ಶಾಲೆಗಳನ್ನ ಮುಚ್ಚಲ್ಲ: ಸಚಿವ ಮಧು ಬಂಗಾರಪ್ಪ
