ನವದೆಹಲಿ: ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಕಟ್ಟಡ, ಫ್ಲಾಟ್ ಫಾರಂ ಸೇರಿದಂತೆ ಉತ್ತಮ ಮೂಲಸೌಕರ್ಯ ಒದಗಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ತಿಳಿಸಿದ್ದಾರೆ.
ರೈಲು ಸೇವೆ ಹೆಚ್ಚಿಸಲು ಕ್ರಮ
ಈ ವಿಚಾರವಾಗಿ ಲೋಕಸಭೆಯಲ್ಲಿ ಮಾತನಾಡಿದ ಅವರು, ದೇಶದ ಹಲವು ಭಾಗಗಳಲ್ಲಿ ವಂದೇ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅವರು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಮುಂಬೈ ಸೇರಿದಂತೆ ದೇಶದ ಎಲ್ಲಾ ದೊಡ್ಡ ನಗರಗಳಿಗೆ ರೈಲು ಸೇವೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕವಚ್ ವ್ಯವಸ್ಥೆ ಪರಿಚಯ
ಸ್ವಯಂ ಚಾಲಿತ ರೈಲ್ವೆ ಸುರಕ್ಷತಾ ವ್ಯವಸ್ಥೆ- ಕವಚ್ ಸೌಲಭ್ಯವನ್ನು 2 ಸಾವಿರಕ್ಕೂ ಅಧಿಕ ಕಿಲೋಮೀಟರ್ ಮಾರ್ಗ ಹಾಗೂ 4 ಸಾವಿರಕ್ಕೂ ಅಧಿಕ ಲೋಕೋಮೋಟಿವ್ ಗಳಲ್ಲಿ ಅಳವಡಿಕೆ ಮಾಡಲಾಗಿದೆ. ರೈಲ್ವೆ ಕಾರ್ಯಾಚರಣೆಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ದೇಶೀಯವಾಗಿ ನಿರ್ಮಿಸಲಾಗಿರುವ ಕವಚ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. 40 ಸಾವಿರಕ್ಕೂ ಅಧಿಕ ತಂತ್ರಜ್ಞರು ಮತ್ತು ರೈಲ್ವೆ ಚಾಲಕರಿಗೆ ಈ ಕುರಿತು ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಹಾಗೆಯೇ, ದೇಶದ ಇಂಧನ ವಲಯದಲ್ಲಿ ಕಲ್ಲಿದ್ದಲು ಪ್ರಮುಖ ಪಾತ್ರ ವಹಿಸುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ವಿಸ್ತೃತ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಜಿ.ಕಿಶನ್ ರೆಡ್ಡಿ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಉತ್ತರ ನೀಡಿದ ಅವರು, ಪರಿಣಾಮವಾಗಿ ದೇಶೀಯ ಕಲ್ಲಿದ್ದಲು ಉತ್ಪಾದನೆ ಒಂದು ಶತಕೋಟಿ ಟನ್ ಗೆ ಹೆಚ್ಚಳವಾಗಿದೆ. ಉತ್ಪಾದನೆ ಹಾಗೂ ಪೂರೈಕೆ ಕ್ಷೇತ್ರಗಳಲ್ಲಿ ಹಲವಾರು ಪರಿವರ್ತನೆ ತರಲಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಮುಂದಿನ 7 ವರ್ಷಗಳ ಬೇಡಿಕೆ ಪೂರೈಸುವಷ್ಟು ಕಲ್ಲಿದ್ದಲು ಸಂಗ್ರಹವಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಕಲ್ಲಿದ್ದಲು ಅನಿಲೀಕರಣ ಪ್ರಕ್ರಿಯೆ ಮೂಲಕ ರಸಗೊಬ್ಬರ, ಅಮೋನಿಯಾ ಮುಂತಾದ ಉತ್ಪನ್ನಗಳನ್ನು ತಯಾರಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಸಂಪ್ರದಾಯಿಕ ಕಲ್ಲಿದ್ದಲು ಪೂರೈಕೆ ಜೊತೆಗೆ ಅನಿಲೀಕರಣದಿಂದ ತಯಾರಿಸಲಾದ ಉತ್ಪನ್ನಗಳನ್ನು ಸಹ ಪೂರೈಸಲು ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಕಲ್ಲಿದ್ದಲು ಅನಿಲೀಕರಣಕ್ಕೆ ಸಂಬಂಧಿಸಿ, 7 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
2030 ವೇಳೆಗೆ ನೂರು ದಶಲಕ್ಷ ಟನ್ ನಷ್ಟು ಕಲ್ಲಿದ್ದಲು ಉತ್ಪಾದನೆ ಸಾಧ್ಯವಾಗಲಿದ್ದು, ದೇಶಕ್ಕೆ ಅಪಾರ ಪ್ರಮಾಣದ ವಿದೇಶಿ ವಿನಿಮಯ ಉಳಿತಾಯವಾಗಲಿದೆ. ವಿಕಸಿತ ಭಾರತ ನಿರ್ಮಾಣದಲ್ಲಿ ಕಲ್ಲಿದ್ದಲು ಅನಿಲೀಕರಣ ತಂತ್ರಜ್ಞಾನ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ತಿಳಿಸಿದ್ದಾರೆ.
