ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಇಂದೋರ್ ಮೂಲದ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಎರಡು ಕಠಿಣ ಆಯ್ಕೆಗಳನ್ನು ನೀಡಿದೆ. ಹನಿಮೂನ್ ಪ್ರವಾಸದಲ್ಲಿದ್ದಾಗ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿ ಕೃತ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಸೋನಮ್ಗೆ ಮೇಘಾಲಯದ ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದವು. ಇದನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಆದೇಶ ನೀಡಿದೆ.
ಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಪಿ. ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು ಸೋನಮ್ ಪರ ವಕೀಲರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಮೇಘಾಲಯ ಸರ್ಕಾರದ ಮೇಲ್ಮನವಿಯನ್ನು ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿ ಗುಣಾವಗುಣಗಳ ಆಧಾರದ ಮೇಲೆ ನಾವೇ ನಿರ್ಧರಿಸಬೇಕು, ಇಲ್ಲವೇ ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಯುವವರೆಗೆ ಸೋನಮ್ ಸದ್ಯಕ್ಕೆ ಪೊಲೀಸರಿಗೆ ಶರಣಾಗಬೇಕು ಎಂದು ಕೋರ್ಟ್ ತಿಳಿಸಿದೆ. ಈ ಎರಡು ಆಯ್ಕೆಗಳಲ್ಲಿ ಯಾವುದನ್ನು ಆರಿಸಿಕೊಳ್ಳುತ್ತೀರಿ ಎಂದು ಪ್ರಶ್ನಿಸಿದ ನ್ಯಾಯಪೀಠಕ್ಕೆ ಉತ್ತರಿಸಲು ಸೋನಮ್ ಪರ ವಕೀಲರು ಗುರುವಾರದವರೆಗೆ ಕಾಲಾವಕಾಶ ಕೋರಿದ್ದಾರೆ. ಇದೇ ವೇಳೆ, ಘಟನೆ ನಡೆದ ನಂತರ ಸೋನಮ್ ನಡೆದುಕೊಂಡ ರೀತಿಯನ್ನು ಕೋರ್ಟ್ ಪ್ರಶ್ನಿಸಿದೆ. ತನಗೆ ಬಂಧನದ ಕಾರಣಗಳನ್ನು ಲಿಖಿತವಾಗಿ ನೀಡಿರಲಿಲ್ಲ ಎಂಬ ತಾಂತ್ರಿಕ ಅಂಶವನ್ನು ಆಕೆ ಮೊದಲೇ ಏಕಾಗ್ರಹಿಸಲಿಲ್ಲ ಎಂಬ ಬಗ್ಗೆಯೂ ವಿವರಣೆ ಕೇಳಿದೆ.
ಸೋನಮ್ಗೆ ನೀಡಿರುವ ಜಾಮೀನನ್ನು ಬಲವಾಗಿ ವಿರೋಧಿಸಿದ ಮೇಘಾಲಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಆರೋಪಿಯೇ ಸ್ವತಃ ಬಂದು ಪೊಲೀಸರಿಗೆ ಶರಣಾಗಿದ್ದಾಳೆ. ಇಂತಹ ಸಂದರ್ಭದಲ್ಲಿ ಬಂಧನದ ಕಾರಣಗಳನ್ನು ನೀಡಿಲ್ಲ ಎಂದು ಕಾನೂನು ವಿನಾಯಿತಿ ಕೋರಲು ಸಾಧ್ಯವಿಲ್ಲ. ಬಂಧನ ಪತ್ರದಲ್ಲಿ ಏನಾದರೂ ಲೋಪಗಳಿದ್ದರೆ ಅದು ಕೇವಲ ಕ್ಲೆರಿಕಲ್ ತಪ್ಪು ಮಾತ್ರ ಎಂದಿದ್ದಾರೆ. ಒಬ್ಬ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಾಗ ಅಥವಾ ತಾನಾಗಿಯೇ ಪೊಲೀಸರ ಮುಂದೆ ಬಂದಾಗ ಬಂಧನದ ಕಾರಣಗಳನ್ನು ಪ್ರತ್ಯೇಕವಾಗಿ ವಿವರಿಸುವ ಅಗತ್ಯವಿರುವುದಿಲ್ಲ ಎಂದು ಅವರು ವಾದ ಮಂಡಿಸಿದರು.
ಸಿಬಿಐಗೆ ಒಪ್ಪಿಸುವಂತೆ ಆಗ್ರಹ
ಮತ್ತೊಂದೆಡೆ, 2025 ರಲ್ಲಿ ಮೇಘಾಲಯದಲ್ಲಿ ಕೊಲೆಯಾದ ಇಂದೋರ್ ಉದ್ಯಮಿ ರಾಜಾ ರಘುವಂಶಿ ಕುಟುಂಬಸ್ಥರು ಈ ಪ್ರಕರಣವನ್ನು ತಕ್ಷಣವೇ ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು ಎಂದು ಮತ್ತೊಮ್ಮೆ ಒತ್ತಾಯಿಸಿದ್ದಾರೆ. ಕೆಳ ನ್ಯಾಯಾಲಯಗಳು ನೀಡಿದ್ದ ಜಾಮೀನು ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ರಾಜಾ ಅವರ ಅಣ್ಣ ವಿಪಿನ್ ರಘುವಂಶಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಪ್ರಭಾವಿ ವ್ಯಕ್ತಿಗಳ ಮಕ್ಕಳಿಗೆ ತೊಂದರೆಯಾದ ತಕ್ಷಣ ಸಿಬಿಐ ತನಿಖೆ ಘೋಷಿಸುವ ಸರ್ಕಾರ, ನನ್ನ ತಮ್ಮ ಕೊಲೆಯಾಗಿ ವರ್ಷ ಕಳೆದರೂ ಸಿಬಿಐಗೆ ಒಪ್ಪಿಸಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಆರಂಭದಲ್ಲೇ ಕೇಂದ್ರ ಸಂಸ್ಥೆಗೆ ತನಿಖೆ ವಹಿಸಿದ್ದರೆ, ಮೇಘಾಲಯ ಪೊಲೀಸರ ಕಾನೂನು ಲೋಪಗಳನ್ನು ಬಳಸಿಕೊಂಡು ಮುಖ್ಯ ಆರೋಪಿ ಸೋನಮ್ ಇಷ್ಟರಲ್ಲೇ ಬೇಲ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಜೂನ್ 29 ರಂದು ಮೇಘಾಲಯ ಹೈಕೋರ್ಟ್ ಸರ್ಕಾರದ ಜಾಮೀನು ರದ್ಧತಿ ಅರ್ಜಿಯನ್ನು ವಜಾಗೊಳಿಸಿತ್ತು.
ಇದನ್ನೂ ಓದಿ: ಲಾವಣ್ಯ ಕೊಲೆ ಆರೋಪಿ ಚೇತನ್ ಬಜರಂಗದಳದ ಕಾರ್ಯಕರ್ತನಲ್ಲ: ವೈರಲ್ ಫೋಟೋ ಕುರಿತು ಸಂಘಟನೆ ಸ್ಪಷ್ಟನೆ
