ಭಾನುವಾರ ಅಂತ್ಯಗೊಂಡ 5 ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಟೀಮ್ ಇಂಡಿಯಾವನ್ನ (India vs Australia) ಆರು ವಿಕೆಟ್‌ಗಳಿಂದ ಸೋಲಿಸಿ 3-1 ಸರಣಿಯನ್ನ ಗೆದ್ದುಕೊಂಡಿದೆ. ಬರೋಬ್ಬರಿ 10 ವರ್ಷಗಳ ಬಳಿಕ ಟೀಮ್ ಇಂಡಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border Gavaskar Trophy) ತನ್ನ ಪ್ರಾಬಲ್ಯವನ್ನು ಅಂತ್ಯಗೊಳಿಸಿದೆ. ಕೊನೆಯ ಬಾರಿ ಭಾರತ 2014-15ರಲ್ಲಿ ಟೆಸ್ಟ್ ಸರಣಿ ಸೋಲು ಕಂಡಿತ್ತು. ಇದೀಗ 10 ವರ್ಷಗಳ ಬಳಿಕ ಆಸ್ಟ್ರೇಲಿಯಾ ಟ್ರೋಫಿಯನ್ನ ಮರಳಿ ಪಡೆದಿದೆ. ಈ ಗೆಲುವಿನೊಂದಿ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ತನ್ನ ಸ್ಥಾನವನ್ನು ದೃಢಪಡಿಸಿಕೊಂಡಿದೆ. ಭಾರತದ ನಂತರ ಬ್ಯಾಕ್ ಟು ಬ್ಯಾಕ್ ವಿಶ್ವಟೆಸ್ಟ್ ಚಾಂಪಿಯನ್ ಫೈನಲ್ ತಲುಪಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
WTC ಫೈನಲ್ ರೇಸ್‌ನಿಂದ ಹೊರ ಬಿದ್ದ ಭಾರತ
2014-15ರಲ್ಲಿ ತವರಿನಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯಾ ಸರಣಿ ಗೆದ್ದಿತ್ತು. ಆದಾದ ನಂತರ ತವರಿನಲ್ಲಿ 2 ಹಾಗೂ ಭಾರತದಲ್ಲಿ 2 ಬಾರಿ ಸರಣಿಯನ್ನ ಕಳೆದುಕೊಂಡಿತ್ತು. ಇದೀಗ 2024-25ರ ಸರಣಿಯನ್ನ 3-1ರಲ್ಲಿ ಗೆಲ್ಲುವ ಮೂಲಕ ಸರಣಿಯನ್ನ ಗೆದ್ದಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 3ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದರೆ, ಭಾರತ ಅಂತಿಮ ರೇಸ್‌ನಿಂದ ಹೊರಬಿದ್ದಿದೆ.
ಒಂದು ಸರಣಿ ಇರುವಂತೆಯೇ ಫೈನಲ್ ಖಚಿತ
ಪ್ಯಾಟ್ ಕಮ್ಮಿನ್ಸ್ ನೇತೃತ್ವದ ತಂಡವು ಜೂನ್ 11 ರಂದು ಲಾರ್ಡ್ಸ್‌ನಲ್ಲಿ WTC ಫೈನಲ್‌ನಲ್ಲಿ ಈಗಾಗಲೇ ಅರ್ಹತೆ ಪಡೆದಿರುವ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಈ ತಿಂಗಳ ಕೊನೆಯಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾಗೆ ಪ್ರಯಾಣಿಸಬೇಕಿದೆ. ಭಾರತದ ವಿರುದ್ಧ 3-1ರಲ್ಲಿ ಸರಣಿ ಗೆದ್ದಿರುವುದರಿಂದ ಆ ಸರಣಿ ಫಲಿತಾಂಶ ಯಾವುದೇ ಪರಿಣಾಮ ಬೀರುವುದಿಲ್ಲ.
ಬ್ಯಾಟಿಂಗ್ ವೈಫಲ್ಯದಿಂದ ಸೋಲು
ಭಾರತ ನ್ಯೂಜಿಲೆಂಡ್ ವಿರುದ್ಧ 3-0 ಅಂತರದ ಸೋಲಿನ ಬಳಿಕ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಲ್ಲಿ ಭಾರತದ ಸ್ಥಿತಿ ಕಷ್ಟಕರವಾಗಿತ್ತು. ಆದರೂ ಈ ಹಿಂದೆ ಸತತ 2 ಸರಣಿ ಗೆದ್ದಿದ್ದರಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬಹುದು ಎಂದು ಭಾವಿಸಲಾಗಿತ್ತು. ಆದರೆ ಭಾರತ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಸರಣಿಯನ್ನ ಕಳೆದುಕೊಂಡಿದೆ.