ರಾಜ್ಯದಲ್ಲಿ ಶೇಕಡ 63ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿರುವುದನ್ನ ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷ ಬಿಜೆಪಿ (BJP) ಹರಿಹಾಯ್ದಿದೆ.
ಸಿಬಿಐ ತನಿಖೆಗೆ ಆಗ್ರಹ ಮಾಡಿದ ಬಿಜೆಪಿ
ಈ ವಿಚಾರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿದ್ದು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಬೇಕು. ಈ ಆರೋಪ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿಂದು ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಬೋವಿ ಅಭಿವೃದ್ಧಿ ನಿಗಮಗಳಲ್ಲಿ , ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮುಡಾ ಹಗರಣದಲ್ಲಿ 14 ನಿವೇಶನ ಲೂಟಿ ಮಾಡಿ ಮತ್ತೆ ಅದನ್ನು ವಾಪಸ್ ಮಾಡಿರುವುದರಿಂದ, ಈ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ನಿದರ್ಶನಗಳಾಗಿವೆ. ಇದೀಗ ಉಪ ಲೋಕಾಯುಕ್ತರು ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಸಿಎಂ ಕಾಸ್ಟ್ಲಿ ವಾಚ್ ಬಗ್ಗೆ ದಾಖಲೆ ರಿಲೀಸ್ ಮಾಡಲಿ
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಹ ಈ ವಿಚಾರವಾಗಿ ಕಿಡಿಕಾರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದುಬಾರಿ ಕೈಗಡಿಯಾರ ಕಟ್ಟಿರುವ ವಿಚಾರದಲ್ಲಿ ಜನತೆಗೆ ಸತ್ಯಾಂಶ ತಿಳಿಸಬೇಕು. ಲಕ್ಷಾಂತರ ರೂಪಾಯಿ ಬೆಲೆಬಾಳುವ ಈ ಕೈಗಡಿಯಾರ ಖರೀದಿಸಿರುವ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಮನೆಯಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್, ಸಿಎಂ ಪೋಸ್ಟ್ ಸೇಫ್?
