ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮದ ಲೆಕ್ಕಾಚಾರಕ್ಕಾಗಿ ತಮ್ಮ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು, ಕಮಲ ಮುಡಿದಿದ್ದ ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಈಗ ದೆಹಲಿ ರಾಜಕಾರಣದ ದೊಡ್ಡ ಬಾಗಿಲು ತೆರೆಯುವ ಲಕ್ಷಣಗಳು ಕಾಣಿಸುತ್ತಿವೆ. ಮುಂಬರುವ ರಾಜ್ಯಸಭೆ ಚುನಾವಣೆಗೆ ಸುಮಲತಾ ಅಂಬರೀಶ್ ಅವರನ್ನು ಎನ್ಡಿಎ ಮೈತ್ರಿಕೂಟದ ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಗಂಭೀರ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ಜೂನ್ 18 ರಂದು ರಾಜ್ಯಸಭೆಯ ಪ್ರಮುಖ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು, ಅಭ್ಯರ್ಥಿಗಳ ಅಂತಿಮ ಆಯ್ಕೆಗಾಗಿ ನವದೆಹಲಿಯಲ್ಲಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಹಿರಿಯ ನಾಯಕರ ಮಹತ್ವದ ಸಭೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಅಧಿಕೃತ ಪಟ್ಟಿ ಹೊರಬೀಳಲಿದ್ದು, ಸುಮಲತಾ ಅವರ ಹೆಸರು ಇದರಲ್ಲಿ ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರ ಸ್ಪರ್ಧೆಗೆ ಹಾದಿ ಸುಗಮಗೊಳಿಸಲು ಸುಮಲತಾ ಅಂದು ತೋರಿದ್ದ ರಾಜಕೀಯ ಔದಾರ್ಯಕ್ಕೆ ಪ್ರತಿಫಲ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ಒಲವು ತೋರಿದೆ. ಸಭೆಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಹೆಸರಿನ ಜೊತೆಜೊತೆಗೇ ಸುಮಲತಾ ಅವರ ಹೆಸರನ್ನೂ ಗಂಭೀರವಾಗಿ ಚರ್ಚಿಸಲಾಗಿದ್ದು, ರಾಜ್ಯ ನಾಯಕರಿಂದ ಅವರ ಸದ್ಯದ ರಾಜಕೀಯ ಪ್ರಭಾವದ ವರದಿ ಪಡೆಯಲಾಗಿದೆ.
ಸದಾನಂದಗೌಡ ಸೇರಿ ಭಾರಿ ಪೈಪೋಟಿ; ಮೇಲ್ಮನೆಗೂ ಸಿದ್ಧತೆ: ರಾಜ್ಯಸಭೆಯ ಈ ಟಿಕೆಟ್ಗಾಗಿ ಬಿಜೆಪಿಯೊಳಗೆ ದೊಡ್ಡ ಪೈಪೋಟಿಯೇ ಶುರುವಾಗಿದೆ. ರಾಜ್ಯ ಬಿಜೆಪಿ ನಾಯಕರು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಹೆಸರನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟಿದ್ದಾರೆ. ಆದಾಗ್ಯೂ, ಕೇಂದ್ರ ನಾಯಕರೊಂದಿಗೆ ನೇರ ಸಂಪರ್ಕದಲ್ಲಿರುವ ಸುಮಲತಾ ಅವರಿಗೆ ದೆಹಲಿ ತಲುಪುವ ಅವಕಾಶ ಸಿಗುವ ಸಾಧ್ಯತೆ ಶೇಕಡಾ 90 ರಷ್ಟಿದೆ ಎಂದು ರಾಜಕೀಯ ಮೂಲಗಳು ವಿಶ್ಲೇಷಿಸುತ್ತಿವೆ.
ಇದೇ ವೇಳೆ ಕರ್ನಾಟಕ ವಿಧಾನಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ. ರಾಜ್ಯ ಘಟಕವು ನಳೀನ್ ಕುಮಾರ್ ಕಟೀಲ್, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್, ಎನ್. ಮಹೇಶ್ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸೇರಿದಂತೆ ಐದು ಪ್ರಮುಖ ನಾಯಕರ ಹೆಸರುಗಳನ್ನು ಶಾರ್ಟ್ಲಿಸ್ಟ್ ಮಾಡಿ ದೆಹಲಿಗೆ ಕಳುಹಿಸಿದೆ. ರಾಜ್ಯಸಭೆಗೆ ಸುಮಲತಾ ಮತ್ತು ವಿಧಾನಪರಿಷತ್ಗೆ ಹಳೇ ಮೈಸೂರು ಭಾಗದ ಪ್ರಭಾವಿ ನಾಯಕರಿಗೆ ಮಣೆ ಹಾಕುವ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಪಕ್ಷದ ನೆಲೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಹೈಕಮಾಂಡ್ನ ಅಧಿಕೃತ ಆದೇಶದತ್ತ ಎಲ್ಲರ ಗಮನ ನೆಟ್ಟಿದೆ.
ಇದನ್ನೂ ಓದಿ: ದಾವಣಗೆರೆ ಆಂತರಿಕ ಒಳಸಂಚು ವಿವಾದ: ವೈರಲ್ ಆಡಿಯೋ ವಿರುದ್ಧ ಸೈಬರ್ ದೂರು ದಾಖಲಿಸಲು ಜಮೀರ್ ಸಜ್ಜು!
