ಚೈಬಾಸಾ: ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದ್ದು, ನಕ್ಸಲರನ್ನ ಹತ್ಯೆ (Naxals) ಮಾಡಲಾಗಿದೆ.
8 ನಕ್ಸಲರ ಹತ್ಯೆ
ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಹತ್ಯೆ ಮಾಡಿದ್ದು, ಅವರಲ್ಲಿ ಭಯಂಕರ ನಕ್ಸಲ್ ಅನಲ್ ದಾ ಕೂಡ ಸೇರಿದ್ದಾನೆ ಎನ್ನಲಾಗಿದೆ, ಮುಖ್ಯವಾಗಿ ಅವನ ತಲೆಗೆ 1 ಕೋಟಿ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು.
ಆ ಪ್ರದೇಶದಲ್ಲಿ ನಕ್ಸಲರ ಓಡಾಟ ಇರುವ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಚೈಬಾಸಾದ ದಟ್ಟ ಅರಣ್ಯ ಪ್ರದೇಶದಲ್ಲಿ ಈ ಎನ್‌ಕೌಂಟರ್ ಮಾಡಲಾಗಿದೆ. ಈ ಕಾರ್ಯಾಚರಣೆಯ ಸಮಯದಲ್ಲಿ, ನಕ್ಸಲರು ಸಹ ಪಡೆಗಳ ಮೇಲೆ ಗುಂಡು ಹಾರಿಸಿದ್ದು, ಭದ್ರತಾ ಪಡೆಗಳಿಂದ ಭಾರೀ ಪ್ರತಿದಾಳಿ ನಡೆಯಿತು ಎನ್ನುವ ಮಾಹಿತಿ ಇದೆ.
ಇನ್ನೂ ಮುಂದುವರೆದ ಶೋಧಕಾರ್ಯ
ಇನ್ನು ಈ ದಾಳಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದ್ದು, ಈ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ನಕ್ಸಲರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದಿವೆ.
“ಕನಿಷ್ಠ ಎಂಟು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಗುಂಡಿನ ಚಕಮಕಿ ನಿಂತ ನಂತರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸಾವುನೋವುಗಳ ಅಂತಿಮ ಸಂಖ್ಯೆಯನ್ನು ನಂತರ ಒದಗಿಸಲಾಗುವುದು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
